Connect with us

Chikkaballapur

ತಾಲೂಕು ಕಚೇರಿಯಲ್ಲಿ ವಿದ್ಯಾರ್ಥಿಗಳಿಂದ ಕೆಲಸ – ಸರ್ಕಾರಿ ಕೆಲಸಕ್ಕೆ ವಿದ್ಯಾರ್ಥಿಗಳ ದುರ್ಬಳಕೆ

Published

on

ಚಿಕ್ಕಬಳ್ಳಾಪುರ: ಸರ್ಕಾರಿ ಕೆಲಸ ಮಾಡಬೇಕಾದ ಅಧಿಕಾರಿಗಳು ತಮ್ಮ ಕೆಲಸವನ್ನು ವಿದ್ಯಾರ್ಥಿಗಳ ಕೈಯಲ್ಲಿ ಮಾಡಿಸುತ್ತಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿಯಲ್ಲಿ ನಡೆದಿದೆ.

ಗುಡಿಬಂಡೆ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳನ್ನು ತಹಶೀಲ್ದಾರ್ ಹನುಮಂತರಾಯಪ್ಪ ತಾಲೂಕು ಕಚೇರಿಗೆ ಕರೆಸಿ ಕೊಠಡಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮಾಡಿಸುತ್ತಿದ್ದಾರೆ. ಕಾಲೇಜಿಗೆ ಹೋಗಿ ಪಾಠಪ್ರವಚನ ಕೇಳಬೇಕಾದ ವಿದ್ಯಾರ್ಥಿಗಳು ಇಂದು ತಾಲೂಕು ಕಚೇರಿಗೆ ಬಂದು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದಾರೆ.

ತಮ್ಮ ಅಂಡ್ರಾಯ್ಡ್ ಮೂಬೈಲ್‍ಗಳ ಮೂಲಕ ಎನ್.ಎಸ್.ವಿ ಆ್ಯಪ್ ಮೂಲಕ ಸಾರ್ವಜನಿಕರ ಮತದಾರರ ಪಟ್ಟಿಯ ಪರಿಷ್ಕರಣೆಯ ಮಾಹಿತಿಯನ್ನು ಅಪ್ ಲೋಡ್ ಮಾಡುವ ಕೆಲಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಅಧಿಕಾರಿಗಳು ಮಾಡಬೇಕಾದ ಕೆಲಸ ವಿದ್ಯಾರ್ಥಿಗಳ ಕೈಯಲ್ಲಿ ಮಾಡಿಸೋದು ಎಷ್ಟು ಸರಿ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಏನಿದು ಮತದಾರರ ಪಟ್ಟಿ ಪರಿಷ್ಕರಣೆ?
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಡೆಸುವಂತೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಚುನಾವಣಾ ಆಯೋಗ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಗಡುವು ನೀಡಿದೆ. ಆಕ್ಟೋಬರ್ 1 ರಿಂದ ಆಕ್ಟೋಬರ್ 15 ರ ಒಳಗೆ ಶೇ.50 ರಷ್ಟು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆ ಸೂಚನೆ ನೀಡಿದೆ.

ಹೀಗಾಗಿ ಅಧಿಕಾರಿಗಳು ಮನೆ ಮನೆಗೆ ಹೋಗಿ ಈಗಿರುವ ವೋಟರ್ ಐಡಿ ಕಾರ್ಡ್ ಅನ್ನು ಅನ್ ಲೈನ್ ಆ್ಯಪ್ ಮೂಲಕ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಸೇರಿದಂತೆ ಇತರೆ ಏನಾದ್ರೂ ಲೋಪ ದೋಷಗಳಿದ್ದಲ್ಲಿ ಅವುಗಳನ್ನು ತಿದ್ದುಪಡಿ ಮಾಡಿ ನೂತನವಾಗಿ ವೋಟರ್ ಐಡಿ ಕಾರ್ಡ್ ನೊಂದಣಿ ಮಾಡಿಸಬೇಕಿದೆ. ನೊಂದಣಿಯಾದ ನಂತರ ಜನವರಿ ತಿಂಗಳಲ್ಲಿ ಹೊಸ ಸ್ಮಾರ್ಟ್ ಕಾರ್ಡ್ ರೀತಿಯ ವೋಟರ್ ಐಡಿ ಮತದಾರರಿಗೆ ಸಿಗಲಿದೆ. ಇದರಿಂದ ಬೇರೆ ಬೇರೆ ವಿಳಾಸಗಳಲ್ಲಿ ಒಬ್ಬ ವ್ಯಕ್ತಿಯದ್ದೇ ಎರಡು ಎರಡು ಕಾರ್ಡ್‍ಗಳಿದ್ದರೆ ಅವುಗಳಿಗೆ ಕಡಿವಾಣ ಹಾಕುವುದರ ಜೊತೆಗೆ ವೋಟರ್ ಐಡಿ ಡಿಜಿಟಲೈಜೆಷನ್ ಮಾಡುವ ಉದ್ದೇಶ ಚುನಾವಣಾ ಆಯೋಗದ್ದಾಗಿದೆ.

ಟಾರ್ಗೆಟ್ ರೀಚ್ ಮಾಡಲು ವಾಮಮಾರ್ಗ:
ಚುನಾವಣಾ ಆಯೋಗ ನೀಡಿದ ಟಾರ್ಗೆಟ್ ರೀಚ್ ಮಾಡೋಕೆ ಅಧಿಕಾರಿಗಳು ಹೆಣಗಾಡುವಂತಾಗಿದೆ. ಸಿಬ್ಬಂದಿ ಕೊರತೆ, ಸರ್ವರ್ ಪ್ರಾಬ್ಲಂ ನಿಂದ ಟಾರ್ಗೆಟ್ ರೀಚ್ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಜಿಲ್ಲಾಪಂಚಾಯತಿ ವತಿಯಿಂದ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಗೆ ನುರಿತ ತಂತ್ರಜ್ಞರಿಂದ ತಮ್ಮ ಮೊಬೈಲ್ ಗಳಲ್ಲೇ ಚುನಾವಣಾ ಆಯೋಗದ ಆ್ಯಪ್ ಮೂಲಕ ತಮ್ಮ ಮನೆಯ ವೋಟರ್ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡಿಕೊಳ್ಳುವಂತೆ ತರಬೇತಿ ನೀಡಲು ಆದೇಶಿಸಲಾಗಿದೆ. ಆದರೆ ಇದೇ ಆದೇಶದ ಮೂಲಕ ತರಬೇತಿ ಪಡೆದ ಕಾಲೇಜು ವಿದ್ಯಾರ್ಥಿಗಳನ್ನ ತಾಲೂಕು ಕಚೇರಿಗೆ ಕರೆಸಿದ ತಹಶೀಲ್ದಾರ್ ಅವರ ಮೂಲಕ ಸಾರ್ವಜನಿಕರ ಮತದಾರರ ಪಟ್ಟಿ ಯ ಪರಿಷ್ಕರಣೆಯ ಕಾರ್ಯ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *