– ಕೇತನ್ ಮುಗಿಸಲು ಚೇತನ್ ಜೊತೆ ಸಿಯಾ ಪ್ಲ್ಯಾನ್; ಸಿಸಿಟಿವಿ ದೃಶ್ಯ ವೈರಲ್
ಮುಂಬೈ: ಟ್ರೆಕ್ಕಿಂಗ್ ನೆಪದಲ್ಲಿ ಪ್ರಿಯಕರನೊಂದಿಗೆ ಭಾವಿ ಪತಿಯನ್ನು (Maharashtra Murder Case) ಕೊಲೆ ಮಾಡಿದ ಪ್ರಕರಣದ ಕುರಿತು ಮತ್ತಷ್ಟು ರಹಸ್ಯಗಳು ಹೊರಬಿದ್ದಿವೆ. ಭಾವಿ ಪತಿ ಕೇತನ್ ಅಗರ್ವಾಲ್ ಸಾವಿಗೂ ಕೆಲ ಗಂಟೆಗಳ ಮೊದಲು ಸಿಯಾ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಕೆಫೆಯಲ್ಲಿ ಕುಳಿತು ಮರ್ಡರ್‌ಗೆ ಪ್ಲ್ಯಾನ್ ನಡೆಸಿರುವ ಸಿಸಿಟಿವಿ ವಿಡಿಯೋ(CCTV Video) ವೈರಲ್ ಆಗಿದೆ.
ಪುಣೆ ಉದ್ಯಮಿ ಪುತ್ರ ಕೇತನ್ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಈ ಹತ್ಯೆಯ ಸಂಚು ರೂಪಿಸಿದ್ದರು. ಜೂನ್ 18ರಂದು ಪುಣೆಯ ಕೆಫೆಯೊಂದರಲ್ಲಿ ಭೇಟಿಯಾದ ಇಬ್ಬರೂ, ಕೇತನ್‌ನನ್ನು ಹೇಗೆ ಕೊಲೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೆ ಕೋಟೆಯ ಯಾವ ಸ್ಥಳದಿಂದ ತಳ್ಳಿದರೆ ಕೇತನ್ ಸಾಯಬಹುದು ಎಂಬುದನ್ನೂ ಮೊದಲೇ ಪ್ಲ್ಯಾನ್ ಮಾಡಿದ್ದರು.
ಅದೇ ದಿನ ಮಧ್ಯಾಹ್ನ ಸಿಯಾ, ಕೇತನ್‌ನನ್ನು ಲೋಹಗಡ್ ಕೋಟೆಗೆ(Lohagad Fort) ಟ್ರೆಕ್ಕಿಂಗ್‌ಗೆ ಕರೆದುಕೊಂಡು ಹೋಗಿದ್ದಳು. ಚೇತನ್ ಕೂಡ ವೇಷ ಮರೆಸಿಕೊಂಡು ಅವರನ್ನೇ ಹಿಂಬಾಲಿಸಿಕೊಂಡು ಹೋಗಿದ್ದ. ಟ್ರೆಕ್ಕಿಂಗ್ ವೇಳೆ ಇಬ್ಬರೂ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ.
ಕೇಸ್‌ಗೆ ತಿರುವು ಸಿಕ್ಕಿದ್ದೆಲ್ಲಿ?
ಘಟನೆ ನಡೆದ ಬಳಿಕ ಸಿಯಾ ಗೋಯಲ್, ಕೇತನ್ ಅಗರ್ವಾಲ್ ಕಾಲು ಜಾರಿ ಕಣಿವೆಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬದವರಿಗೆ ತಿಳಿಸಿದ್ದಳು. ಆರಂಭದಲ್ಲಿ ಕೇತನ್ ಕುಟುಂಬವೂ ಇದನ್ನು ಅಪಘಾತ ಎಂದು ನಂಬಿತ್ತು. ಆದರೆ ತನಿಖೆ ವೇಳೆ ಸಿಸಿಟಿವಿ ದೃಶ್ಯಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿವೆ.
ಲೋಹಗಡ್ ಕೋಟೆ ಪ್ರದೇಶದ ಸಿಸಿಟಿವಿ ದೃಶ್ಯಗಳಲ್ಲಿ ಸಿಯಾ ಮತ್ತು ಕೇತನ್‌ನನ್ನು ಒಬ್ಬ ವ್ಯಕ್ತಿ ಹಿಂಬಾಲಿಸುತ್ತಿರುವುದು ಕಂಡುಬಂದಿತ್ತು. ಹಳದಿ ಬಣ್ಣದ ಹೂಡಿ ಧರಿಸಿ ಮುಖ ಮುಚ್ಚಿಕೊಂಡಿದ್ದ ಈ ವ್ಯಕ್ತಿಯೇ ಪೊಲೀಸರಿಗೆ ಅನುಮಾನ ಮೂಡಿಸಿದ್ದ. ಬಳಿಕ ಆತ ಸಿಯಾಳ ಪ್ರಿಯಕರ ಚೇತನ್ ಚೌಧರಿ ಎಂಬುದು ತನಿಖೆಯಲ್ಲಿ ಬಹಿರಂಗವಾಯಿತು.
ಇದು ಮೊದಲ ಕೊಲೆ ಯತ್ನವಾಗಿರಲಿಲ್ಲ. ಮೇ 31ರಂದು ಸಿಯಾ ಕೇತನ್‌ನನ್ನು ಇದೇ ಕೋಟೆಗೆ ಕರೆದೊಯ್ದಿದ್ದಳು. ಜೂನ್ 4ರಂದು ಮತ್ತೊಮ್ಮೆ ಹೋಗಲು ಒತ್ತಾಯಿಸಿದ್ದರೂ ಕೇತನ್ ಅವರ ತಾಯಿ ಅನುಮತಿ ನೀಡಿರಲಿಲ್ಲ. ಬಳಿಕ ಜೂನ್ 14ರಂದು ಮತ್ತೆ ಕೋಟೆಗೆ ತೆರಳಿದ್ದ ವೇಳೆ ಕೇತನ್‌ನನ್ನು ತಳ್ಳಲು ಯತ್ನಿಸಿದ್ದಾಳೆ. ಆ ವೇಳೆ ಕೇತನ್ ಪೊದೆ-ಬಳ್ಳಿಗಳನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದ. ಯಾಕೆ ತಳ್ಳಿದೆ? ಎಂದು ಕೇತನ್ ಪ್ರಶ್ನಿಸಿದಾಗ, ಹಾವು ಕಂಡಿತ್ತು, ನಿನ್ನನ್ನು ರಕ್ಷಿಸಲು ಪ್ರಯತ್ನಿಸಿದೆ ಎಂದು ಸಿಯಾ ಹೇಳಿದ್ದಳು.
2,004 ಕರೆಗಳು, 238 ಗಂಟೆಗಳ ಮಾತುಕತೆ
ಈ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಸಿಯಾ ಮತ್ತು ಚೇತನ್ ನಡುವೆ ಒಟ್ಟು 2,004 ಫೋನ್ ಕರೆಗಳು ನಡೆದಿವೆ. ಇಬ್ಬರೂ ಸುಮಾರು 238 ಗಂಟೆಗಳ ಕಾಲ ಮಾತನಾಡಿದ್ದಾರೆ. ಕೆಲವು ಕರೆಗಳು 2 ರಿಂದ 3 ಗಂಟೆಗಳವರೆಗೆ ಮುಂದುವರಿದಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸಿಸಿಟಿವಿಯಿಂದ ಬಯಲಾಯ್ತು ಸಂಚು
ಕೋಟೆಯಲ್ಲಿ ಸಿಯಾ ಮತ್ತು ಕೇತನ್ ಹಿಂದೆ ಚೇತನ್ ಹಿಂಬಾಲಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದವು. 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ ಚೇತನ್ ದಪ್ಪ ಹೂಡಿ ಧರಿಸಿಕೊಂಡಿರುವುದು ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಬಳಿಕ ಸಿಸಿಟಿವಿ ದೃಶ್ಯಗಳು, ಕರೆಗಳ ದಾಖಲೆಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿನ ಮಾಹಿತಿಗಳ ಆಧಾರದಲ್ಲಿ ಪೊಲೀಸರು ಚೇತನ್‌ನನ್ನು ಪತ್ತೆಹಚ್ಚಿದರು.ಇದನ್ನೂ ಓದಿ: ಕೊಲೆಗಾರ್ತಿ ಬರ್ತ್‌ಡೇ ಸೆಲಬ್ರೇಷನ್‌ಗೆ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ 70 ರೂಮ್ ಬುಕ್ ಮಾಡಿದ್ದ ಕೇತನ್ ತಂದೆ
ಕೇತನ್ ಅಗರ್ವಾಲ್ ತಮ್ಮ ಕುಟುಂಬದ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ನಿರ್ದೇಶಕ ಹಾಗೂ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿದ್ದ. ಈ ವರ್ಷದ ಫೆಬ್ರವರಿಯಲ್ಲಿ ಸಿಯಾ ಜೊತೆ ನಿಶ್ಚಿತಾರ್ಥ ನಡೆದಿತ್ತು. ನವೆಂಬರ್‌ನಲ್ಲಿ ಉದಯಪುರದಲ್ಲಿ ಅದ್ದೂರಿ ಮದುವೆ ನಡೆಯಬೇಕಿತ್ತು.ಆದರೆ, ಸಿಯಾಗೆ ಈ ಮದುವೆಯಾಗಲು ಇಷ್ಟವಿರಲಿಲ್ಲ. ತನ್ನ ಪ್ರಿಯಕರ ಚೇತನ್ ಜೊತೆಗಿನ ಸಂಬಂಧಕ್ಕೆ ಕೇತನ್ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಗಿದೆ.
ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಬಾಲಿಗೆ ತೆರಳುವ ಯೋಜನೆಯೂ ಇತ್ತು. ಜೂನ್ 6ರಂದು ಕೇತನ್ ಅವರ ಪಾಸ್‌ಪೋರ್ಟ್‌ನ್ನು ಸಿಯಾ ಕದ್ದು ಮಹಿಳಾ ಶೌಚಾಲಯದಲ್ಲಿ ಬಿಟ್ಟು ಬಂದಿದ್ದಳು. ಇದರಿಂದ ಆ ಪ್ರವಾಸ ರದ್ದಾಗಿತ್ತು. ವಿಚಾರಣೆ ವೇಳೆ ಮದುವೆ ಮುರಿದು ಓಡಿ ಹೋಗಬಹುದಿತ್ತಲ್ಲವೇ? ಎಂದು ಪೊಲೀಸರು ಪ್ರಶ್ನಿಸಿದಾಗ, ನಿಶ್ಚಿತಾರ್ಥ ಮುರಿದರೆ ಕುಟುಂಬಕ್ಕೆ ಅವಮಾನವಾಗುತ್ತದೆ ಎಂದು ಸಿಯಾ ಹೇಳಿದ್ದಳು ಎಂದು ಚೇತನ್ ಹೇಳಿದ್ದಾನೆ. ಸದ್ಯ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ವಿರುದ್ಧ ಕೊಲೆ ಹಾಗೂ ಕ್ರಿಮಿನಲ್ ಸಂಚು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಹೂಡಿ ಸುಳಿವಿನಿಂದ ಬಯಲಾಯ್ತು ಕೊಲೆ ರಹಸ್ಯ; ಭಾವಿ ಪತಿಯನ್ನು ಕೊಂದ ಕಿರಾತಕಿ ಪ್ಲ್ಯಾನ್ ಹೇಗಿತ್ತು ಗೊತ್ತಾ?
