– ಚೇತನ್ ಧರಿಸಿದ್ದ ಬಟ್ಟೆಯಿಂದ ಬಯಲಾಯ್ತು ಕೇತನ್ ಕೊಲೆ ಸಂಚು
– ಲೊಕೇಶನ್ ಪತ್ತೆಯಾಗದಂತೆ ಸಿಬ್ಬಂದಿ ಮೊಬೈಲ್ ಬಳಕೆ
ಮುಂಬೈ: ಟ್ರೆಕ್ಕಿಂಗ್(trekking) ನೆಪದಲ್ಲಿ ಯುವತಿ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಕೊಲೆ ಮಾಡಿದ ಪ್ರಕರಣವನ್ನು ಪೊಲೀಸರು ಈಗ ಯಶಸ್ವಿಯಾಗಿ ಬೇಧಿಸಿದ್ದಾರೆ.ಕೇಸ್ ಮಹತ್ವದ ತಿರುವು ಪಡೆಯಲು ಆರೋಪಿ ಚೇತನ್ ಧರಿಸಿದ್ದ ಹೂಡಿಯೇ ಪೊಲೀಸರಿಗೆ ಪ್ರಮುಖ ಸುಳಿವು ನೀಡಿತ್ತು ಎನ್ನುವುದು ವಿಶೇಷ.
ಮಹಾರಾಷ್ಟ್ರದ (Maharashtra) ಲೋಹಗಡ್ ಕೋಟೆಯಲ್ಲಿ(Lohagad Fort) ಜೂನ್ 18 ರಂದು ಈ ಘಟನೆ ನಡೆದಿತ್ತು. ಪುಣೆಯ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಭಾವಿ ಪತ್ನಿ ಸಿಯಾ ಗೋಯಲ್ ಜೊತೆ ಟ್ರೆಕ್ಕಿಂಗ್ ಹೋದ ವೇಳೆ ಕಾಲು ಜಾರಿ ಮೃತಪಟ್ಟಿದ್ದರು ಹೇಳಲಾಗಿತ್ತು. ಆದರೆ, ಮೊದಲಿಗೆ ಅಪಘಾತವೆಂದು ಪರಿಗಣಿಸಿದ್ದ ಈ ಪ್ರಕರಣ ಬೇರೆಯೇ ತಿರುವು ಪಡೆದುಕೊಂಡಿದೆ. ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಜೊತೆ ಸೇರಿ ಕೇತನ್‌ನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ.
ಪೊಲೀಸರಿಗೆ ಅನುಮಾನ ಮೂಡಿದ್ದೆಲ್ಲಿ?
ಮೊದಲಿಗೆ ಅಪಘಾತ ಎಂದು ಪರಿಗಣಿಸಲಾಗಿದ್ದ ಈ ಪ್ರಕರಣದ ತನಿಖೆಯಲ್ಲಿ, ಸಿಸಿಟಿವಿ ದೃಶ್ಯಾವಳಿಗಳೇ ಪೊಲೀಸರಿಗೆ ಪ್ರಮುಖ ಸುಳಿವಾಗಿ ಸಿಕ್ಕಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಬಲವಾದ ಸಾಕ್ಷ್ಯ ಒದಗಿಸಿವೆ. ಕೋಟೆಯ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಿಸಿಲಿನ ನಡುವೆಯೂ ಹೂಡಿ(ಕ್ಯಾಪ್ ಇರುವ ಸ್ವೆಟ್‌ಶರ್ಟ್) ಧರಿಸಿದ್ದ ವ್ಯಕ್ತಿಯೊಬ್ಬ ಕೇತನ್ ಮತ್ತು ಸಿಯಾ ಗೋಯಲ್ ಅವರನ್ನು ಹಿಂಬಾಲಿಸುತ್ತಿರುವುದು ಪೋಲಿಸರ ಕಣ್ಣಿಗೆ ಬಿದ್ದಿದೆ.
ಜೂನ್ ತಿಂಗಳಲ್ಲಿ 33 ಡಿಗ್ರಿ ಉಷ್ಣಾಂಶ ಇದ್ದರೂ ಹೂಡಿ ಧರಿಸಿದ್ದ ವ್ಯಕ್ತಿ ಅನುಮಾನಕ್ಕೆ ಕಾರಣನಾದ. ಅಷ್ಟೊಂದು ಬಿಸಿಲಿನಲ್ಲಿ, ಟ್ರೆಕ್ಕಿಂಗ್ ಮಾಡುವ ವೇಳೆ ವ್ಯಕ್ತಿಯೇಕೆ ಅಷ್ಟು ದಪ್ಪ ಮತ್ತು ಬೆಚ್ಚಗಿನ ಬಟ್ಟೆ ಧರಿಸಿದ್ದ ಎಂಬ ಸಂಶಯ ಪೊಲೀಸರಲ್ಲಿ ಮೂಡಿತು. ಬಳಿಕ ಆತನ ಗುರುತು ಪತ್ತೆ ಹಚ್ಚಿದ್ದು, ಆತ ಚೇತನ್ ಚೌಧರಿ ಎಂದು ತಿಳಿದುಬಂದಿದೆ. ತನಿಖೆ ವೇಳೆ ಚೇತನ್ ತನ್ನ ಮೊಬೈಲ್ ಫೋನ್ ಅನ್ನು ಕೆಲಸದ ಸ್ಥಳದಲ್ಲೇ ಬಿಟ್ಟು ಹೋಗಿದ್ದ. ತನ್ನ ಲೊಕೇಶನ್ ಪತ್ತೆಯಾಗದಂತೆ ಸಿಬ್ಬಂದಿಯ ಮೊಬೈಲ್ ಬಳಸಿದ್ದ ಎನ್ನಲಾಗಿದೆ. 
ಇನ್ನೊಂದೆಡೆ, ಸಿಯಾ ಮತ್ತು ಚೇತನ್ ಪರಸ್ಪರ ಸಾವಿರಾರು ಬಾರಿ ಕರೆ ಮಾಡಿದ್ದಾರೆ. ಹಲವು ಗಂಟೆಗಳ ಕಾಲ ಇಬ್ಬರೂ ಮಾತನಾಡಿರುವ ಕಾಲ್ ಹಿಸ್ಟರಿ ದಾಖಲೆಗಳು ಪೊಲೀಸರಿಗೆ ಲಭ್ಯವಾಗಿವೆ. ಸಿಯಾ ಮತ್ತು ಚೇತನ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕುಟುಂಬದ ಗೌರವದ ಕಾರಣ ಮದುವೆ ರದ್ದು ಮಾಡಿಕೊಳ್ಳಲು ಸಿಯಾ ಒಪ್ಪಿರಲಿಲ್ಲ. ಕೇತನ್ ಮತ್ತು ಸಿಯಾ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ವರ್ಷದ ನವೆಂಬರ್‌ನಲ್ಲಿ ಉದಯಪುರದಲ್ಲಿ ಅದ್ದೂರಿ ಮದುವೆ ನಿಗದಿಯಾಗಿತ್ತು. ಆದರೆ ಮದುವೆಗೆ ಮುನ್ನವೇ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದುಕೊಂಡು ಹೋಗುವಂತೆ ಸಿಯಾ ಹಲವು ಬಾರಿ ಒತ್ತಾಯ ಮಾಡಿದ್ದಳು. ಜೂನ್ 18ರಂದು ಕೋಟೆಯ ಕಣಿವೆ ಸಮೀಪ ಮೂವರು ಇದ್ದ ವೇಳೆ ಕೇತನ್ ಸುಮಾರು 400 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ.ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ ಕೇಸ್ – ಆರೋಪಿ ಜೋಡಿ 7 ದಿನ ಪೊಲೀಸ್ ಕಸ್ಟಡಿಗೆ
ಘಟನೆ ಬಳಿಕ ಸಿಯಾ ಪೊಲೀಸರಿಗೆ ಕರೆ ಮಾಡಿ, ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದಿದ್ದಾರೆ ಎಂದು ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಮೊದಲಿಗೆ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ ಸಿಸಿಟಿವಿ ದೃಶ್ಯ, ಮೊಬೈಲ್ ಕರೆಗಳ ವಿವರ ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಇದು ಪೂರ್ವನಿಯೋಜಿತ ಕೊಲೆ ಸಾಬೀತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರೂ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆಗೆ 17 ಕೋಟಿ ವೆಚ್ಚದ ಅರಮನೆ ಬುಕ್; ಪ್ರಿ-ವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ ವರನ ಕೊಂದ ಕಿರಾತಕಿ
