ಚಿಕ್ಕಬಳ್ಳಾಪುರ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್‌ಗೆ (KSRTC Bus) ಏಕಾಏಕಿ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟುಹೋದ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು (Gauribidanur) ತಾಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌರಿಬಿದನೂರು ಕೆಎಸ್‌ಆರ್‌ಟಿಸಿ ಘಟಕಕ್ಕೆ ಸೇರಿದ ಬಸ್ ನಗರದಿಂದ ಮರಿಪಡಿಗು ಗ್ರಾಮದತ್ತ ತೆರಳುತ್ತಿತ್ತು. ಎಂ.ಗೊಲ್ಲಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ವೇಳೆ ಬಸ್‌ನಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ತಕ್ಷಣ ಬಸ್ ಅನ್ನು ಸುರಕ್ಷಿತವಾಗಿ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಇದನ್ನೂ ಓದಿ: ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ನೀಡದಿದ್ರೆ ಪಿಡಿಒ ಅಮಾನತು: ಶಿವರಾಜ್ ತಂಗಡಗಿ ಎಚ್ಚರಿಕೆ
ನೋಡನೋಡುತ್ತಿದ್ದಂತೆ ಬೆಂಕಿ ಬಸ್‌ನ ವಿವಿಧ ಭಾಗಗಳಿಗೆ ವ್ಯಾಪಿಸಿದ್ದು, ಬಸ್‌ನ ಬಹುತೇಕ ಭಾಗ ಸಂಪೂರ್ಣವಾಗಿ ಸುಟ್ಟುಹೋಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಸ್‌ಗೆ ಭಾರೀ ಪ್ರಮಾಣದ ಹಾನಿಯಾಗಿತ್ತು. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ; ಮೃತರ ಸಂಖ್ಯೆ 40ಕ್ಕೆ ಏರಿಕೆ
ಘಟನೆಯ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬಸ್‌ಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದು ತಾಂತ್ರಿಕ ಪರಿಶೀಲನೆಯ ಬಳಿಕ ತಿಳಿದುಬರಬೇಕಿದೆ. ಚಾಲಕರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಸರ್ಕಾರಿ ಬಸ್‌ಗಳ ತಾಂತ್ರಿಕ ತಪಾಸಣೆ ಹಾಗೂ ನಿರ್ವಹಣೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಂದೇ ಮಾತರಂ ಹಾಡುವುದನ್ನು ತಡೆಯಲು ಸೋನಿಯಾ ಗಾಂಧಿ ಯತ್ನ: ಬಿಜೆಪಿ ಆರೋಪ
