– ಕಾವೇರಿ 4 ಡ್ಯಾಂಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ?
– ಸುಪ್ರೀಂಗೆ ಮೇಲ್ಮನವಿ ಸಲ್ಲಿಕೆಗೆ ಚಿಂತನೆ
ಬೆಂಗಳೂರು: ರಾಜ್ಯದಲ್ಲಿ ಮಳೆ ಮರೀಚಿಕೆ ಆಗಿರುವ ಹೊತ್ತಲ್ಲೇ ಕರ್ನಾಟಕಕ್ಕೆ ಮತ್ತೆ ಕಾವೇರಿ ಆಘಾತ ಎದುರಾಗಿದೆ. ತಮಿಳುನಾಡಿಗೆ ಪ್ರತಿನಿತ್ಯ 6,000 ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಶಿಫಾರಸು ಮಾಡಿರೋ ಶಿಫಾರಸ್ಸನ್ನು ಪಾಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ.
ಇದರಿಂದಾಗಿ, ನಾಲ್ಕು ಜಲಾಶಯಗಳಲ್ಲಿ ಲಭ್ಯವಿರುವ 72.48 ಟಿಎಂಸಿಯಲ್ಲಿ ಪ್ರತಿನಿತ್ಯ ಅರ್ಧ ಟಿಎಂಸಿಯಂತೆ 7.5 ಟಿಎಂಸಿಯನ್ನ ಕರ್ನಾಟಕ ಹರಿಸಬೇಕಿದೆ. ಈಗಾಗಲೇ ಕರ್ನಾಟಕಕ್ಕೆ 3 ಬಾರಿ ಹಿನ್ನಡೆಯಾಗಿದ್ದು, 38.45 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿದೆ. ಮತ್ತೆ 7.5 ಟಿಎಂಸಿ ಹರಿಸಲು ಆದೇಶ ನೀಡಿರುವುದರಿಂದ ಕರ್ನಾಟಕಕ್ಕೆ ಜಲಾಘಾತ ಎದುರಾಗಿದೆ.

CWMA ಆದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರಗೊಂಡು ಹಣೆ ಚಚ್ಚಿಕೊಂಡಿದ್ದಾರೆ. ಇನ್ನೊಂದೆಡೆ, ಕಾನೂನು ತಜ್ಞರ ಜೊತೆ ಚರ್ಚಿಸಿ ಸುಪ್ರೀಂ ಕೋರ್ಟ್ ಮೇಲ್ಮನವಿ ಸಲ್ಲಿಸೋ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಅಂತ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇನ್ನೂ, ಎಂದಿನಂತೆ ಮಂಡ್ಯದ ಸಂಜಯ್ ವೃತ್ತದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಕಾವೇರಿ 4 ಡ್ಯಾಂಗಳಲ್ಲಿ ನೀರಿನ ಲಭ್ಯತೆ ಎಷ್ಟಿದೆ?
* ಕೆಆರ್‌ಎಸ್- ಸದ್ಯ 28.496 ಟಿಎಂಸಿ (106.66 ಅಡಿ )
(ಒಳಹರಿವು- 2,289 ಕ್ಯೂಸೆಕ್, ಹೊರಹರಿವು: 4,073 ಕ್ಯೂಸೆಕ್)
* ಕಬಿನಿ – 10.98 ಟಿಎಂಸಿ (2,268.54 ಅಡಿ)
(ಒಳಹರಿವು 1,751 ಕ್ಯೂಸೆಕ್, ಹೊರಹರಿವು: 1,200 ಕ್ಯೂಸೆಕ್)
* ಹೇಮಾವತಿ ಜಲಾಶಯ- 24.904 ಟಿಎಂಸಿ (2,907.59 ಅಡಿ )
(ಒಳಹರಿವು: 3,414 ಕ್ಯೂಸೆಕ್., ಹೊರಹರಿವು: 9,150 ಕ್ಯೂಸೆಕ್ )
* ಹಾರಂಗಿ ಜಲಾಶಯ: 8.1 ಟಿಎಂಸಿ (2,857.91 ಅಡಿ)
(ಒಳಹರಿವು: 833 ಕ್ಯೂಸೆಕ್, ಹೊರ ಹರಿವು : 900 ಕ್ಯೂಸೆಕ್)
