ಚಾಮರಾಜನಗರ: ವನ್ಯಜೀವಿಗಳಿಗೆ ತೊಂದರೆಯಾಗದಂತೆ ತಡೆಯಲು ಜಿಲ್ಲೆಯ ಗುಂಡ್ಲುಪೇಟೆ (Bandipur Safari) ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ 18 ಸಫಾರಿ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಸಫಾರಿ ಮಾಡುವಾಗ ವನ್ಯಜೀವಿಗಳ ಸಹಜ ಚಲನವಲನಕ್ಕೆ ಅಡ್ಡಿಯಾಗದಂತೆ ನಿಗಾ ಇರಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಸಫಾರಿ ವೇಳೆ ಹುಲಿ, ಚಿರತೆ ಸಹಿತ ಇನ್ನಿತರ ವನ್ಯಪ್ರಾಣಿಗಳು ಕಾಣಿಸಿಕೊಂಡರೆ ವಾಹನ ಚಾಲಕರು ಇತರೆ ಸಫಾರಿ ವಾಹನಗಳ ಚಾಲಕರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ಪರಿಣಾಮ ಸಫಾರಿಗೆ ತೆರಳಿದ್ದ ಎಲ್ಲ ವಾಹನಗಳು ಪ್ರಾಣಿಗಳು ಇರುವ ಜಾಗಕ್ಕೆ ದಾಂಗುಡಿ ಇಡುತ್ತಿದ್ದವು. ಒಂದೇ ಕಡೆ ಹಲವು ವಾಹನಗಳು ಜಮಾಯಿಸುತ್ತಿದ್ದರಿಂದ ಪ್ರಾಣಿಗಳ ಸಹಜ ಬೇಟೆ ಹಾಗೂ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿತ್ತು.
ಸಫಾರಿ ವಲಯ ಹೊರತುಪಡಿಸಿ ನಿರ್ಬಂಧಿತ ಸ್ಥಳಗಳಿಗೂ ಕೆಲವರು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೂರುಗಳು ಹೆಚ್ಚಾಗಿದ್ದವು. ಆಗಾಗ ವನ್ಯಜೀವಿಗಳು ಪ್ರವಾಸಿಗರ ಮೇಲೆ ದಾಳಿಗೂ ಮುಂದಾಗುತ್ತಿದ್ದ ಘಟನೆಗಳು ನಡೆಯುತ್ತಿದ್ದವು. ಇಂತಹ ನಿರ್ಬಂಧಿತ ಚಟುವಟಿಕೆಗಳನ್ನು ತಡೆಯಲು ಹಾಗೂ ನಿಗಾ ವಹಿಸಲು ವಾಹನಗಳಲ್ಲಿ ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ.ಇದನ್ನೂ ಓದಿ: ರೀಲ್ಸ್‌ಗಾಗಿ 30 ಅಡಿ ಎತ್ತರದಿಂದ ಡ್ಯಾಂಗೆ ಜಿಗಿದ ವ್ಯಕ್ತಿ – ಎರಡೂ ಕಾಲುಗಳ ಮೂಳೆ ಮುರಿತ
ಈ ಕುರಿತು ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಮಾತನಾಡಿ, ಜಿಪಿಎಸ್ ಹಾಗೂ ಕ್ಯಾಮೆರಾ ಅಳವಡಿಕೆಯಿಂದ ವಾಹನಗಳು ಸಂಚರಿಸುವ ಮಾರ್ಗ, ವೇಗ, ಪ್ರಾಣಿಗಳ ಚಲನವಲನ ಸಹಿತ ಹಲವು ಮಾಹಿತಿಗಳು ಲಭ್ಯವಾಗಲಿದೆ. ಸಫಾರಿ ವೇಳೆ ನಡೆಯುವ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಬಹುದು, ವನ್ಯಜೀವಿಗಳ ಹಾಗೂ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ತಂತ್ರಜ್ಞಾನ ಅಳವಡಿಕೆ ಹೆಚ್ಚು ಸಹಕಾರಿ ಎಂದು ಹೇಳಿದ್ದಾರೆ.ಇದನ್ನೂ ಓದಿ: ತುಂಗಭದ್ರಾ ಎಡದಂಡೆ ಕಾಲುವೆ ಕೆಳಭಾಗಕ್ಕೆ ನೀರು ಹರಿಸಲು ಆಗ್ರಹ: ರೈತರಿಂದ ಪ್ರತಿಭಟನೆ
