– ಸುತ್ತಮುತ್ತಲಿನ ಮನೆಗಳ ಗಾಜು ಪುಡಿ ಪುಡಿ; ಭೂಕಂಪನದ ಅನುಭವ
ಮಂಗಳೂರು: ಭೀಕರ ಸ್ಫೋಟಕ್ಕೆ ಸಾಕ್ಷಿಯಾಗಿದ್ದ MRPL ಸುತ್ತಮುತ್ತಲಿನ ವಾತಾವರಣ ಸದ್ಯ ಸಹಜ ಸ್ಥಿತಿಗೆ ಬಂದಿದೆ. ಆದರೆ, ಈ ಸ್ಫೋಟದಿಂದಾಗಿ ಜನರಲ್ಲಿ ಒಂದು ಕಡೆ ಆತಂಕ, ಇನ್ನೊಂದೆಡೆ ಆಕ್ರೋಶವೂ ವ್ಯಕ್ತವಾಗತೊಡಗಿದೆ. ಈ ನಡುವೆ ಘಟನೆ ಸಂಬಂಧಿಸಿ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಭರವಸೆಯಿತ್ತಿದ್ದಾರೆ.
ಮಂಗಳೂರಿನ ತೈಲ ಶುದ್ಧಿಕರಣ ಘಟಕ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸುತ್ತಮುತ್ತಲಿನ 10 ಕಿಮಿ ವ್ಯಾಪ್ತಿಯ ಭೂಮಿ ಕಂಪನಗೊಂಡಿದೆ. ಮನೆ ಗಾಜು ಪುಡಿಪುಡಿಯಾಗಿದೆ. ಗೋಡೆಗಳು ಬಿರುಕುಬಿಟ್ಟಿದೆ. ಅಷ್ಟೇ ಅಲ್ಲ ಸ್ಫೋಟಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶೇಕ್ ಆಗಿದೆ.
ಜೋಕಟ್ಟೆ ಭಾಗದ MRPLನ ಮೂರನೇ ಸ್ಟೇಜ್‌ನ CHT ಯೂನಿಟ್‌ನಲ್ಲಿ ಮಧ್ಯಾಹ್ನ 12:20ಕ್ಕೆ ಭಯಾನಕ ಸ್ಫೋಟ ಸಂಭವಿಸಿದೆ. ಕೋಕರ್ ಹೈಡ್ರೋ ಟ್ರಿಯರ್ (CHT)ಯೂನಿಟ್‌ನಲ್ಲಿ ಲೀಕೇಜ್ ಆದ ಪರಿಣಾಮ ಭಯಾನಕ ಸ್ಫೋಟ ಸಂಭವಿಸಿದೆ. ದೊಡ್ಡ ಬೆಂಕಿಯ ಉಂಡೆ ಬಾನೆತ್ತರವನ್ನ ಮುತ್ತಿಕೊಂಡಿತ್ತು. ಸುಮಾರು ಅರ್ಧ ಕಿಲೋಮಿಟರ್ ವ್ಯಾಪ್ತಿಯಷ್ಟು ಬೆಂಕಿಯ ಕೆನ್ನಾಲಿಗೆ ಅವರಿಸಿತ್ತು. MRPLನ ಹೊರಭಾಗದಿಂದಲೇ ಇದನ್ನ ಕಂಡಂತಹ ಜನ ತಮ್ಮ ತಮ್ಮ ಮನೆ ಬಿಟ್ಟು ಹೊರಗಡೆ ಓಡಿ ಬಂದಿದ್ದಾರೆ.
ಸ್ಫೋಟದ ಪರಿಣಾಮ ಮೂಲ್ಕಿಯ ಹಳೆಯಂಗಡಿ ನಿವಾಸಿ ಕಾರ್ಮಿಕ 23 ವರ್ಷದ ಮನೀಶ್ ಕರ್ಕಡ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅದಾಗಲೇ ಅಪಾಯದಲ್ಲಿದ್ದ 11 ಜನ ಸಿಬ್ಬಂದಿಯನ್ನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಹಾಜರಾತಿ ಪರಿಶೀಲಿಸಿದಾಗ ಮೂಲ್ಕಿಯ ಮನೀಶ್ ನಾಪತ್ತೆಯಾಗಿದ್ದರು. ಬೆಂಕಿಯನ್ನ ನಂದಿಸಿ ತೀವ್ರ ಶೋಧ ನಡೆಸಿದ ವೇಳೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ದುರ್ದೈವಿ ಮನೀಶ್ ಮೃತದೇಹ ಪತ್ತೆಯಾಗಿದೆ. ಇನ್ನುಳಿದಂತೆ ರಾಜೇಶ್ ಬ್ಯಾಪಿಸ್ಟ್ ಎಂಬ ಕಾರ್ಮಿಕನಿಗೆ 35% ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಗಂಭೀರ ಗಾಯಗೊಂಡ ರಾಜೇಶ್ ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರಿಗೆ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣ ಪುಟ್ಟ ಗಾಯಗೊಂಡ ನಾಲ್ವರಿಗೆ MRPL ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಫೋಟ ಸಂಭವಿಸಿದ ಜಾಗಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಂಗಳೂರು ಉತ್ತರ ಶಾಸಕ ಭರತ್ ವೈ ಶೆಟ್ಟಿ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಘಟನಾ ಸ್ಥಳದ ಭೀಕರತೆ ಬಿಚ್ಚಿಟ್ಟಿದ್ದಾರೆ.
ಘಟನೆಯಿಂದ ಸುಮಾರು 300ಕ್ಕೂ ಅಧಿಕ ಮನೆಗಳು, ಶಾಲೆ, ದೇವಸ್ಥಾನ ಚರ್ಚ್ ಮಸೀದಿಗೆ ಹಾನಿಯಾಗಿದೆ. ಘಟನೆಯಿಂದ ಜನ ಆತಂಕಕ್ಕೀಡಾಗಿದ್ದಾರೆ. ಆತಂಕದಿಂದಲೇ ನಮ್ಮ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಬೇಕಾದ ವ್ಯವಸ್ಥೆ MRP ನಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

