ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಬೇಟೆಗಾರರ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಕೊನೆಗೂ ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹನೂರು ಪೊಲೀಸ್ ಠಾಣೆಯಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮೃತ ಆಥೋಣಿಸಾಮಿ ಪತ್ನಿ ಲೂರ್ದಾಮೇರಿ ದೂರಿನ ಆಧಾರದಲ್ಲಿ ಕೇಸ್ ದಾಖಲಾಗಿದೆ. ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳು ಹನೂರು ವಿಭಾಗ ಎಂದು ಆರೋಪಿಗಳನ್ನಾಗಿಸಲಾಗಿದೆ. ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಅಂತ FIRನಲ್ಲಿ ನಮೂದಿಸಲಾಗಿದೆ.
ಬಿಎನ್ ಎಸ್ 103(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಕ್ಷಿಣ ವಲಯ ಐಜಿ ಬೋರಲಿಂಗಯ್ಯ, ಚಾಮರಾಜನಗರ ಎಸ್ಪಿ ಮುತ್ತುರಾಜು ಸಮ್ಮುಖದಲ್ಲಿ ಪ್ರಕರಣ ದಾಖಲಾಗಿದೆ. ಐಜಿ, ಎಸ್ಪಿ ಬೆಳಗ್ಗೆಯಿಂದಲೂ ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದಾರೆ.
ದೂರಿನಲ್ಲೇನಿದೆ?
ನಾವು ಹಸು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಿನ್ನೆ ನಮ್ಮ ಹಸುಗಳು ಕಾಡಿಗೆ ಮೇಯಲು ಹೋಗಿದ್ದವು. ಅವುಗಳು ವಾಪಸ್ ಬಂದಿರಲಿಲ್ಲ. ಹಸುಗಳನ್ನು ಹುಡುಕಿಕೊಂಡು ಬರಲು ನಿನ್ನೆ ಸಂಜೆ ನನ್ನ ಪತಿ ಆಥೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್, ದೊಡ್ಡಪ್ಪನ ಮಗ ಜೋಸೆಫ್ ತೆರಳಿದ್ದರು. ಬೆಳಗ್ಗೆ ಆದರೂ ಅವರು ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಜೋಸೆಫ್ ಕರೆ ಮಾಡಿ ಘಟನೆ ವಿವರಿಸಿದ. ಮರಿಯಮಂಗಲ ಗ್ರಾಮದಿಂದ 4 ಕಿಮೀ ಕಾಡಿನಲ್ಲಿ ನಾವು ವಿಶ್ರಾಂತಿ ಮಾಡುತ್ತಾ ಮಲಗಿದ್ದೆವು. ಬೆಳಗಿನ ಜಾವ ಸುಮಾರು 3 ರಿಂದ 5 ಗಂಟೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ರು. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟರು. ನಾನು ತಪ್ಪಿಸಿಕೊಂಡು ಬಂದೆ ಎಂದು ಜೋಸೆಫ್ ತಿಳಿಸಿದ್ರು. ಅರಣ್ಯ ಇಲಾಖೆ ಅಧಿಕಾರಿಗಳು ಕೊಲೆ ಮಾಡಿದ್ದಾರೆ ಎಂದು ಆಂಥೋಣಿಸ್ವಾಮಿ ಪತ್ನಿ ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
