Connect with us

Bengaluru City

ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಬಿಎಸ್‍ವೈಗೆ ಅಧಿಕಾರ ಸಿಕ್ಕಿಲ್ಲ: ಜಮೀರ್ ಅಹ್ಮದ್

Published

on

ಬೆಂಗಳೂರು: ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಸಿಕ್ಕಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬಿಜೆಪಿ 2013ರಲ್ಲಿ ಟಿಪ್ಪು ಜಯಂತಿ ಆಚರಿಸಿಲ್ಲ. ಹೀಗಾಗಿಯೇ ಅವರು ಅಧಿಕಾರಕ್ಕೆ ಬರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ 3 ವರ್ಷಗಳ ಕಾಲ ಆಚರಣೆ ಮಾಡಿದರು. ಅದೇ ಕಾರಣಕ್ಕೆ ಅವರು ಪದೇ ಪದೇ ಗೆಲುವು ಸಾಧಿಸುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಬಿ.ಎಸ್.ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದಾರೆ. ಅಬ್ಬಾಬ್ಬಾ ಏನದು ಟಿಪ್ಪು ಕತ್ತಿ, ಟೋಪಿ ವೇಷ, ಮುಸ್ಲಿಂ ಬಂಧು ಅಂತ ನಾಟಕ ಮಾಡಿದರು. ನೋಡಿ… ನೋಡಿ… ಬಿಜೆಪಿಯವರ ಟಿಪ್ಪು ಜಯಂತಿ ಆಚರಣೆ ಡ್ರಾಮ ಎಂದು ವ್ಯಂಗ್ಯವಾಡಿದ ಸಚಿವರು, ತಮ್ಮ ಮೊಬೈಲ್ ತೆಗೆದು ವಿಡಿಯೋ ತೋರಿಸಿದರು.

ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಶ್ರೀರಾಮುಲು, ಆರ್.ಅಶೋಕ್, ಪಿ.ಸಿ.ಮೋಹನ್, ಸಿ.ಪಿ.ಯೋಗೇಶ್ವರ್ ಟಿಪ್ಪು ಜಯಂತಿ ಆಚರಿಸಿದ ವಿಡಿಯೋ ತೋರಿಸಿದ ಸಚಿವ ಜಮೀರ್ ಅಹ್ಮದ್ ಬಿಜೆಪಿ ನಾಯಕರ ಕಾಲೆಳೆದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರ ಬ್ಯಾಟ್ ಬೀಸಿದ ಸಚಿವ ಜಮೀರ್ ಅಹ್ಮದ್, ವಾರ್ತಾ ಇಲಾಖೆ ಆಹ್ವಾನ ಪತ್ರಿಕೆ ನೋಡಿ ಶಾಕ್ ಆಗಿತ್ತು. ಆಗ ನಿರ್ದೇಶಕರು ಕೇಳಿದರೆ ಸಿಎಂ ಕಚೇರಿಯಿಂದ ಹೆಸರು ಬೇಡ ಅಂತ ಅಂದಿದ್ದರು ಎನ್ನುವ ಮಾಹಿತಿ ಕೊಟ್ಟರು. ಹೀಗಾಗಿ ನಾನೇ ಖುದ್ದು ಕುಮಾರಸ್ವಾಮಿ ಅವರಿಗೆ ನವೆಂಬರ್ 3 ರಂದು ಕರೆ ಮಾಡಿ ವಿಚಾರಿಸಿದೆ. ಆಗ ಅವರು ಆರೋಗ್ಯ ವಿಚಾರವಾಗಿ 3 ದಿನಗಳ ಕಾಲ ಬೇರೆ ಊರಿಗೆ ಹೋಗುತ್ತಿದ್ದಾರೆ ಅಂತ ತಿಳಿಸಿದರು ಎಂದು ಸ್ಪಷ್ಟನೆ ನೀಡಿದ ಸಚಿವರು, ಇದು ಕಾಂಗ್ರೆಸ್ ಕಾರ್ಯಕ್ರಮವಲ್ಲ. ಟಿಪ್ಪು ಜಯಂತಿ ಆಚರಣೆ ಅಷ್ಟೇ ಎಂದು ಗುಡುಗಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews