ಮದುವೆ ಗಂಡು ಬರೋದು ತಡವಾಗಿದ್ದಕ್ಕೆ ಅದೇ ಮಂಟಪದಲ್ಲಿ ಇನ್ನೊಬ್ಬನನ್ನು ವರಿಸಿದ ವಧು

ಮುಂಬೈ: ಮದುವೆ ಗಂಡು ಮಂಟಪಕ್ಕೆ ಬರೋದು ತಡವಾಗಿದ್ದಕ್ಕೆ, ವಧುವಿನ ತಂದೆ ಅದೇ ಮಂಟಪದಲ್ಲಿ ಇದ್ದ ತನ್ನ ಸಂಬಂಧಿಕನಿಗೆ ಮದುವೆ ಮಾಡಿಸಿರುವ ಕುತೂಹಲಕಾರಿ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.
ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಂಗ್ರಾ ಗ್ರಾಮದಲ್ಲಿ ಮದುವೆ ನಡೆಯಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿತ್ತು. ಸಂಜೆ 4 ಗಂಟೆಗೆ ಮದುವೆ ಸಮಾರಂಭಕ್ಕೆ ಶುಭಮುಹೂರ್ತ ಇಡಲಾಗಿತ್ತು. ವಧು ಮತ್ತು ಆಕೆಯ ಕುಟುಂಬದವರು ವರನ ಸ್ಥಳಕ್ಕೆ ಬರುವಿಕೆಗೆ ಕಾಯುತ್ತಿದ್ದರು. ವಧು ಮತ್ತು ಆಕೆಯ ಕುಟುಂಬ ಸಾಕಷ್ಟು ಕಾದರೂ ಮದುಮಗನ ಸುಳಿವೇ ಸಿಗಲಿಲ್ಲ. 4 ಗಂಟೆಗೆ ಬರಬೇಕಾದವರು 8 ಗಂಟೆಯಾದರೂ ಬರಲಿಲ್ಲ. ನೋಡೋವರೆಗೂ ನೋಡಿ ಕೊನೆಗೆ ವಧುವಿನ ತಂದೆ ತಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಅದೇ ಮಂಟಪದಲ್ಲಿ ಮದುವೆ ಮಾಡಿದ್ದಾರೆ. ಇದನ್ನೂ ಓದಿ: ಬೇರೆಯವರೊಂದಿಗೆ ಮದುವೆ ಆಗಿದ್ದಕ್ಕೆ ವಧುವನ್ನೇ ಕೊಂದ ಪ್ರೇಮಿ
ಈ ಬಗ್ಗೆ ಮಾತನಾಡಿರುವ ವಧುವಿನ ತಾಯಿ, ನಾವು 8 ಗಂಟೆಯವರೆಗೂ ಕಾದೆವು. ಆ ಬಳಿಕ ಮದುವೆ ಮಂಟಪಕ್ಕೆ ಆಗಮಿಸಿದ ವರ ಪಾನಮತ್ತನಾಗಿದ್ದ. ತನ್ನ ಸ್ನೇಹಿತರ ಜತೆ ಸೇರಿಕೊಂಡು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿ ಮದ್ಯದ ಅಮಲಿನಲ್ಲೇ ಮಂಟಪಕ್ಕೆ ಬಂದಿದ್ದ. 4 ಗಂಟೆಯ ಬದಲು 8 ಗಂಟೆಗೆ ಬಂದಿದ್ದಲ್ಲದೆ, ನಮ್ಮೊಂದಿಗೆ ಜಗಳ ಆಡಲು ಆರಂಭಿಸಿದ. ಯಾಕೋ ಇದು ಸರಿಯಲ್ಲ ಅಂದುಕೊಂಡು ನಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಮಗಳನ್ನು ಕೊಟ್ಟು ಅದೇ ಮಂಟಪದಲ್ಲಿ ಮದುವೆ ಮಾಡಿಕೊಟ್ಟೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ವರ ಅನಕ್ಷರಸ್ಥನೆಂದು ಮಂಟಪದಲ್ಲೇ ಮದುವೆ ನಿಲ್ಲಿಸಿದ ವಧು!
ಮದುವೆಗೆ ಮೊದಲೇ ಎಲ್ಲಾ ಸಿದ್ಧತೆಗಳು ನಡೆದಿದ್ದರಿಂದ, ವಧುವಿನ ತಂದೆ ನಂತರ ಮದುವೆಗೆ ಬಂದಿದ್ದ ಸಂಬಂಧಿಕರನ್ನು ಸಂಪರ್ಕಿಸಿ, ತನ್ನ ಮಗಳನ್ನು ಆತನಿಗೆ ಮದುವೆ ಮಾಡಿದ್ದಾರೆ. ವರ ಮತ್ತು ಆತನ ಕಡೆಯವರು ಕುಣಿದು ಕುಪ್ಪಳಿಸುವಲ್ಲಿ ನಿರತರಾಗಿದ್ದರು. ಮದುವೆ ಸಮಯ ಸಂಜೆ 4 ಗಂಟೆಗೆ ಇತ್ತು ಆದರೆ, ಅವರು ರಾತ್ರಿ 8 ಗಂಟೆಗೆ ಸ್ಥಳಕ್ಕೆ ತಲುಪಿದರು. ಹಾಗಾಗಿ ನನ್ನ ಮಗಳನ್ನು ನನ್ನ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿದ್ದೇನೆ ಎಂದು ವಧುವಿನ ತಂದೆ ತಿಳಿಸಿದ್ದಾರೆ.