ಕಾರವಾರ: ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯಲ್ಲಿ ಕಯಾಕಿಂಗ್ ವೇಳೆ ನಾಪತ್ತೆಯಾಗಿದ್ದ ಕಾರವಾರದ ಖ್ಯಾತ ಉದ್ಯಮಿ ಹಾಗೂ ರೆಸ್ಟೋರೆಂಟ್ ಮಾಲೀಕ ಸತೀಶ್ ಮಾಳ್ಸೇಕರ್ ಅವರ ಮೃ. ತದೇಹ ಗುರುವಾರ ಪತ್ತೆಯಾಗಿದೆ.
ಬುಧವಾರ ಸಂಜೆ ಹಣಕೋಣದ ಕಾಳಿ ನದಿಯಲ್ಲಿ ಕಯಾಕಿಂಗ್‌ಗೆ ತೆರಳಿದ್ದ ಸತೀಶ್ ಮಾಳ್ಸೇಕರ್ ಅವರು ಆಕಸ್ಮಿಕವಾಗಿ ನೀರಿನಲ್ಲಿ ಕಣ್ಮರೆಯಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ನದಿಯ ಆಳ ಹಾಗೂ ನೀರಿನ ತೀವ್ರ ಸೆಳೆತದಿಂದಾಗಿ ಬುಧವಾರ ರಾತ್ರಿ ತನಕ ಯಾವುದೇ ಸುಳಿವು ದೊರೆತಿರಲಿಲ್ಲ.
ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ ವೇಳೆ ಸತೀಶ್ ಅವರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಸತೀಶ್ ಮಾಳ್ಸೇಕರ್ ಅವರು ಹಲವು ವರ್ಷಗಳ ಹಿಂದೆ ಇದೇ ಪ್ರದೇಶದ ರೆಸಾರ್ಟ್‌ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರೆಂದು ತಿಳಿದುಬಂದಿದೆ. ಹಳೆಯ ನೆನಪುಗಳ ಜಾಗಕ್ಕೆ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ದುಃಖ ಮೂಡಿಸಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಯಾಕಿಂಗ್ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
