ಬೆಂಗಳೂರು: ಕೆಆರ್ ಪುರಂ (KR Puram) ವ್ಯಾಪ್ತಿಯಲ್ಲಿ ಪ್ರಿಯಕರನ ಜೊತೆ ಸೇರಿಕೊಂಡು ಶ್ವೇತಾ ತ್ರಿವಳಿ ಕೊಲೆ ಮಾಡಿ ತಿಂಗಳು ಕಳೆಯುವ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ತ್ರಿಬಲ್ ಮರ್ಡರ್ ಕೇಸ್ ಬೆಳಕಿಗೆ ಬಂದಿದೆ.

ಕಾಮಾಕ್ಷಿಪಾಳ್ಯದ ಕೊಟ್ಟಿಗೆ ಪಾಳ್ಯದಲ್ಲಿರುವ ಗಣೇಶ ದೇವಸ್ಥಾನದ ಬಳಿಯ ನಿವಾಸದಲ್ಲಿ ಈ ಘಟನೆ ನಡೆದಿದೆ. ತಾಯಿ ಮಂಗಳಮ್ಮ (55), ಅಜ್ಜಿ ನಂಜಮ್ಮ (65) ಹಾಗೂ ಮಾವ ಸತೀಶ್ (50) ಅನ್ನು ಆರೋಪಿ ಪ್ರಶಾಂತ್ (34) ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕಾಗಿ ತಾಯಿಯ ಹತ್ಯೆ – ಇದೇ ರೀತಿ ಅಪ್ಪನನ್ನು ಮುಗಿಸಿದ್ದಳಾ ಮಗಳು?
ಕುಟುಂಬಸ್ಥರೆಲ್ಲರು ಕಳೆದ ಏಳೆಂಟು ವರ್ಷದಿಂದ ಕೊಟ್ಟಿಗೆಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಪ್ರಶಾಂತ್ ಡ್ರೈವಿಂಗ್ ಕೆಲಸ ಮಾಡ್ತಿದ್ದ. ಆದರೆ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗಿರಲಿಲ್ಲ. ಇಂದು ತಂದೆ ಕೆಲಸಕ್ಕೆ ಹೋಗಿದ್ದಾಗ ಪ್ರಶಾಂತ್ ಮೂವರನ್ನ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆರೋಪಿ:
ಕಳೆದ ಐದಾರು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಶಾಂತ್‌ಗೆ ಮಾವ ಸತೀಶ್ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರಂತೆ. ವೈದ್ಯರು ಟ್ಯಾಬ್ಲೆಟ್ ನೀಡಿದ್ರು. ಆದ್ರೆ ಅದ್ಯಾವುದನ್ನು ತೆಗೆದುಕೊಳ್ಳದೆ ರಸ್ತೆಗೆ ಎಸೆದಿದ್ದ. ಇದು ಆತ ಮತ್ತಷ್ಟು ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು. ಹಾಗಾಗಿ ಕೆರಳಿದ್ದ ಆತ ಇವತ್ತು ಬೆಳಗ್ಗೆ ರೂಂನಲ್ಲಿ ಮಾವನ ಜೊತೆಗೆ ಕ್ಷುಲ್ಲಕ ವಿಚಾರವಾಗಿ ಜಗಳ ಆಡ್ತಿದ್ದ. ಕೊನೆಗೆ ಮಚ್ಚಿನಿಂದ ಕೊಚ್ವಿ ಕೊಲೆ ಮಾಡಿದ್ದ.
ಶಬ್ದ ಕೇಳಿ ತಾಯಿ ಮಂಗಳಮ್ಮ ಮತ್ತು ಅಜ್ಜಿ ನಂಜಮ್ಮ ರೂಂ ಡೋರ್ ಓಪನ್ ಮಾಡಿದ್ದಾರೆ. ಆತನ ಅವತಾರ ಕಂಡವರೇ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿಹೋಗಲು ಮುಂದಾಗಿದ್ರು. ಆದ್ರೆ ಮಾನಸಿಕ ಸ್ಥಿಮಿತ ಕಳೆದುಕೊಂಡವನು ಮನೆ ಬಾಗಿಲಲ್ಲಿಯೇ ಇಬ್ಬರ ಕಥೆ ಮುಗಿಸಿದ್ದ. ಇವ್ರ ಚೀರಾಟ ಕಂಡ ಮೇಲಿನ ಮನೆಯ ನಿವಾಸಿ ಪ್ರಶಾಂತ್‌ನನ್ನ ಮನೆಯ ಒಳಗೆ ತಳ್ಳಿ ಬಾಗಿಲು ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ಹೆದರಿದ್ದ ಆಸಾಮಿ ರೂಮಿನಲ್ಲಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.ಇದನ್ನೂ ಓದಿ: ಬಹಾಮಾಸ್‌ನಲ್ಲಿ ವಿಮಾನ ಪತನ – 10 ಮಂದಿ ದುರ್ಮರಣ
