ತಮ್ಮ ವಿಭಿನ್ನ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಲೂಸ್ ಮಾದ ಯೋಗಿ (Loose Mada Yogi)ಇದೀಗ ಹೊಸ ಚಿತ್ರ ‘ಫಾರೆವರ್‘(Forever Movie) ಮೂಲಕ ಮತ್ತೆ ತೆರೆಗೆ ಬರಲು ಸಜ್ಜಾಗಿದ್ದಾರೆ.
ಯೋಗಿ ಅಭಿನಯದ 51ನೇ ಚಿತ್ರವಾದ ‘ಫಾರೆವರ್‘ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.
ಸುಪ್ರೀಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಂ. ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಿಸುತ್ತಿರುವ ಈ ಚಿತ್ರವನ್ನು ‘ಚಂದ್ರಿಕಾ‘ ಖ್ಯಾತಿಯ ಯೋಗೇಶ್ ಎಂ. ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆರಂಭ ಫಲಕ ತೋರಿದರೆ, ಶಾಸಕ ಕೃಷ್ಣಪ್ಪ ಕ್ಯಾಮೆರಾ ಚಾಲನೆ ಮಾಡಿದರು. ‘ನಾಗರಹಾವು‘ ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು. ಟ್ಯಾಂಕರ್ ಮೇಲಿದ್ದ ಚಿತ್ರದ ಶೀರ್ಷಿಕೆಯನ್ನು ಗಣ್ಯರು ಸೇರಿ ಅನಾವರಣಗೊಳಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಮುಹೂರ್ತದ ಬಳಿಕ ಮಾತನಾಡಿದ ಲೂಸ್ ಮಾದ ಯೋಗಿ, “ಸುಮಾರು ಎರಡು ವರ್ಷಗಳ ಬಳಿಕ ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ನಡೆಯುತ್ತಿದೆ. ಧ್ರುವ ಸರ್ಜಾ ನನ್ನ ಶಾಲಾ ದಿನಗಳ ಸ್ನೇಹಿತ. ಅವರು ಬಂದು ಕ್ಲಾಪ್ ಮಾಡಿದ್ದು ತುಂಬಾ ಖುಷಿಯಾಗಿದೆ. ನಿರ್ದೇಶಕರು ಒಳ್ಳೆಯ ಕಥೆ ಬರೆದಿದ್ದಾರೆ. ನಾನು ಇದುವರೆಗೆ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿದರು.
“ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಜೊತೆಗೆ ಮತ್ತೊಂದು ವಿಶೇಷ ಅಂಶವೂ ಇದೆ. ಅದನ್ನು ಸದ್ಯಕ್ಕೆ ರಿವೀಲ್ ಮಾಡುವುದಿಲ್ಲ. ನಾನು ಬೈಕ್‌ಗಳನ್ನು ತುಂಬಾ ಇಷ್ಟಪಡುತ್ತೇನೆ. ಈ ಕಥೆಯೂ ಬೈಕ್ ರೈಡಿಂಗ್‌ಗೆ ಹತ್ತಿರವಾಗಿರುವುದರಿಂದ ಇನ್ನಷ್ಟು ಇಷ್ಟವಾಯಿತು. ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ” ಎಂದರು.
ನಿರ್ದೇಶಕ ಯೋಗೇಶ್ ಮುನಿಸಿದ್ದಪ್ಪ ಮಾತನಾಡಿ, “ಕಳೆದ ಮೂರು ವರ್ಷಗಳಿಂದ ಈ ಕಥೆಯ ಮೇಲೆ ಕೆಲಸ ಮಾಡಿದ್ದೇನೆ. ಯೋಗಿ ಅವರ ಹುಟ್ಟುಹಬ್ಬದ ದಿನವೇ ಸಿನಿಮಾ ಆರಂಭಿಸಬೇಕು ಎಂದುಕೊಂಡಿದ್ದೆ. ಈಗ ಅದು ಸಾಧ್ಯವಾಗಿದೆ. ‘ಯುಗ ಮರೆಯದ ಪ್ರೇಮಕಥೆ‘ ಎಂಬ ಅಡಿಬರಹದೊಂದಿಗೆ ಸಿನಿಮಾ ಮೂಡಿಬರುತ್ತಿದ್ದು, ಪ್ರೇಮಕಥೆಯ ಜೊತೆಗೆ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಕಮರ್ಷಿಯಲ್ ಅಂಶಗಳೂ ಚಿತ್ರದಲ್ಲಿವೆ” ಎಂದು ತಿಳಿಸಿದರು.
ನಿರ್ಮಾಪಕ ಎಂ. ವೆಂಕಟನಾರಾಯಣ್ ಮಾತನಾಡಿ, “ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ ಇದಾಗಿದೆ. ಯಾವುದೇ ಕೊರತೆಯಾಗದಂತೆ ಚಿತ್ರವನ್ನು ನಿರ್ಮಿಸುತ್ತೇವೆ. ಪ್ರೇಕ್ಷಕರು ಮತ್ತು ಚಿತ್ರರಂಗದವರ ಬೆಂಬಲ ಬೇಕಿದೆ” ಎಂದು ಹೇಳಿದರು.
ಚಿತ್ರದಲ್ಲಿ ಆಕಾಂಕ್ಷ ರಾವ್ ನಾಯಕಿಯಾಗಿ ನಟಿಸುತ್ತಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾ. ಸಂಗೀತ ನಿರ್ದೇಶಕ ಪ್ರದ್ಯೂತನ್, ಛಾಯಾಗ್ರಾಹಕ ಸಂಕೇತ್ ಸೇರಿದಂತೆ ಚಿತ್ರತಂಡದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿ: ಫಿನಾಲೆ ತಲುಪಿದ ಜೋಡಿ ನಂ.1 ಶೋ
ಒಟ್ಟಾರೆ, ಭರ್ಜರಿ ಮುಹೂರ್ತದೊಂದಿಗೆ ಆರಂಭಗೊಂಡಿರುವ ‘ಫಾರೆವರ್’ ಸಿನಿಮಾ, ಲೂಸ್ ಮಾದ ಯೋಗಿ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್; ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ
