ಜೈಪುರ: ಸರ್ಕಾರಿ ಉದ್ಯೋಗಕ್ಕಾಗಿ ತಾಯಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆಯುಷಿ ಶರ್ಮಾ (23) ವಿರುದ್ಧ ತಂದೆಯ ಹತ್ಯೆ ಆರೋಪ ಈಗ ಕೇಳಿ ಬಂದಿದೆ.
ಆರೋಪಿ ಆಯುಷಿಯ ಸೋದರ ಮಾವ ಆಕೆಯ ತಂದೆ ವಿಜಯ್ ಶರ್ಮಾ ಅವರ ಸಾವು ನೈಸರ್ಗಿಕ ಸಾವಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಅವರ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಈ ಆರೋಪ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕೆಲಸಕ್ಕಾಗಿ 7 ಲಕ್ಷ ಸುಪಾರಿ ಕೊಟ್ಟು ಅಮ್ಮನನ್ನೇ ಮುಗಿಸಿದ ಮಗಳು
ತಾಯಿ ಕೊಲೆಗೆ 7 ಲಕ್ಷ ಸುಪಾರಿ
ಆಸ್ತಿ ಮತ್ತು ತಾಯಿಯ ಸರ್ಕಾರಿ ಉದ್ಯೋಗಕ್ಕಾಗಿ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸೋದರ ಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಆಯುಷಿ ತನ್ನ ತಾಯಿಯ ಕೊಲೆ ಸಂಚು ರೂಪಿಸಿದ್ದಳು. ಬಳಿಕ ಕೊಲೆಗಾಗಿ 7 ಲಕ್ಷ ರೂ. ಸುಪಾರಿ ನೀಡಿ ಬಾಡಿಗೆ ಹಂತಕರನ್ನು ನೇಮಿಸಿದ್ದಳು. ಅದರಂತೆ ಸುಪಾರಿ ಹಂತಕರು ಸ್ಕಾರ್ಪಿಯೋ ಎಸ್‌ಯುವಿಯಿಂದ ಡಿಕ್ಕಿ ಹೊಡೆಸಿ ಆಯುಷಿ ತಾಯಿ ನೀರಜ್ ಶರ್ಮಾ ಅವರನ್ನು ಹತ್ಯೆ ಮಾಡಿದ್ದರು. ಬಳಿಕ ಕೊಲೆಯನ್ನು ಅಪಘಾತದಂತೆ ಬಿಂಬಿಸಿದ್ದರು.

ನೀರಜ್ ಶರ್ಮಾ (45) ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ (ಎಲ್‌ಡಿಸಿ) ಕೆಲಸ ಮಾಡುತ್ತಿದ್ದರು. ಜು.3ರಂದು ನೀರಜ್ ತಮ್ಮ ಮಗನನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದಾಗ, ಪ್ರತಾಪ್ ನಗರ ಬಳಿ 130 ಕಿ.ಮೀ ವೇಗದಲ್ಲಿ ಬಂದ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿತ್ತು. ಈ ವೇಳೆ ಅವರು 100 ಅಡಿಗಳಷ್ಟು ದೂರ ಹಾರಿ ಬಿದ್ದು ಸಾವನ್ನಪ್ಪಿದ್ದರು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ಸಿಸಿ ಟಿವಿಯಿಂದ ಕೃತ್ಯ ಬಯಲು
ತನಿಖಾಧಿಕಾರಿಗಳು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂಬುದು ಗೊತ್ತಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಕೊಲೆ ಸಂಚು ಬಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಷಿ ಶರ್ಮಾ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅನುಕಂಪದ ಮೇಲೆ ನೌಕರಿ ಪಡೆದಿದ್ದ ನೀರಜ್
ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಅವರ ಮರಣದ ನಂತರ, ನೀರಜ್ ಅನುಕಂಪದ ಮೇಲೆ ಎಲ್‌ಡಿಸಿ ಕೆಲಸ ನೀಡಲಾಗಿತ್ತು. ಈ ಕೆಲಸವನ್ನು ಆಯುಷಿ ಬಯಸಿದ್ದಳು. ಅಲ್ಲದೇ ತಾಯಿ ಮಗಳ ನಡುವೆ ಎರಡು ಮೂರು ವರ್ಷಗಳಿಂದ ಆಸ್ತಿ ವಿವಾದವಿತ್ತು ಇದೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆಯ ಕೆಲಸ ಬಯಸಿದ್ದೆ ಎಂದ ಆಯುಷಿ
ತನ್ನ ತಂದೆಯ ಮರಣದ ನಂತರ ಅವರ ಸರ್ಕಾರಿ ಉದ್ಯೋಗವನ್ನು ತಾನು ಬಯಸಿದ್ದೆ. ಆದರೆ ನನ್ನ ತಾಯಿ ಆ ಹುದ್ದೆಯನ್ನು ಪಡೆದುಕೊಂಡರು. ಇದರಿಂದ ನನಗೆ ಬೇಸರವಾಗಿತ್ತು. ಅಲ್ಲದೇ ಆಸ್ತಿಯ ಮೇಲೆ ಹಿಡಿತ ಸಾಧಿಸಲು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆಕೆ ಬಾಯಿ ಬಿಟ್ಟಿದ್ದಾಳೆ. ಇದನ್ನೂ ಓದಿ: ಕೇತನ್ ಜೊತೆ ಎಂಗೇಜ್‌ಮೆಂಟ್, ಲವ್ವರ್ ಜೊತೆ ರಹಸ್ಯ ಮದುವೆ – ಬಗೆದಷ್ಟು ಬಯಲಾಗ್ತಿದೆ ಕ್ರಿಮಿನಲ್ ಬ್ಯೂಟಿ ಸಿಯಾ ಪುರಾಣ
