ಲಾಸ್ ಏಂಜಲೀಸ್: ಫಿಫಾ ವಿಶ್ವಕಪ್‌ನ (FIFA World Cup) ಅತ್ಯಂತ ರೋಮಾಂಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್(Spain) ತಂಡವು ಬೆಲ್ಜಿಯಂ(Belgium) ವಿರುದ್ಧ 2-1 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿ, ಸೆಮಿಫೈನಲ್ ಪ್ರವೇಶಿಸಿದೆ.
ಸ್ಪೇನ್ ತಂಡದ ಪರ ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ(Mikel Merino) ಪಂದ್ಯದ ಕೊನೆಯ ಕ್ಷಣದಲ್ಲಿ (88ನೇ ನಿಮಿಷ) ಬಾರಿಸಿದ ಗೋಲಿನಿಂದ ಸ್ಪೇನ್ ಜಯಗಳಿಸಿತು. ಮಂಗಳವಾರ ಡಲ್ಲಾಸ್‌ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ಟೂರ್ನಿಯ ಬಲಿಷ್ಠ ತಂಡವಾದ ಫ್ರಾನ್ಸ್ ಎದುರು ಸೆಣಸಾಡಲಿದೆ.
ಪಂದ್ಯ ಮುಕ್ತಾಯಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ಮೈದಾನಕ್ಕೆ ಬಂದ ಮೈಕೆಲ್ ಮೆರಿನೊ ಕೇವಲ ಎರಡನೇ ಟಚ್‌ನಲ್ಲೇ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. 88ನೇ ನಿಮಿಷದಲ್ಲಿ ಪಾವು ಕುಬಾರ್ಸಿ ಹೊಡೆದ ಲಾಂಗ್-ರೇಂಜ್ ಶಾಟ್ ಅನ್ನು ಬೆಲ್ಜಿಯಂನ ಬದಲಿ ಗೋಲ್‌ಕೀಪರ್ ಸೆನ್ನೆ ಲ್ಯಾಮೆನ್ಸ್ ತಡೆಯಲು ಯತ್ನಿಸಿದಾಗ ರಿಬೌಂಡ್ ಆದ ಚೆಂಡನ್ನು ಮೆರಿನೊ ಗೋಲಾಗಿ ಪರಿವರ್ತಿಸಿದರು. ಈ ಹಿಂದೆ ನಡೆದಿದ್ದ 16ರ ಘಟ್ಟದ ಪಂದ್ಯದಲ್ಲೂ ಮೆರಿನೊ ಪೋರ್ಚುಗಲ್ ವಿರುದ್ಧ 91ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದ್ದರು.
ಪಂದ್ಯದ 30ನೇ ನಿಮಿಷದಲ್ಲಿ ಸ್ಪೇನ್ ಪರ ಫ್ಯಾಬಿಯನ್ ರೂಯಿಜ್ ಮೊದಲ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಲಮೈನ್ ಯಮಲ್ ಮತ್ತು ಪೆಡ್ರೊ ಪೋರೊ ಅವರ ಅತ್ಯುತ್ತಮ ಪಾಸ್ ನೆರವಿನಿಂದ ಈ ಗೋಲು ಮೂಡಿಬಂದಿತು. ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೋ ಸೋಲಿನ ಬೆನ್ನಲ್ಲೇ ಹಿಂಸಾಚಾರ; ಪ್ಯಾರಿಸ್, ಲಂಡನ್‌ನಲ್ಲಿ ಮುಸ್ಲಿಂ ವಲಸಿಗರ ಹುಚ್ಚಾಟ
🚨🚨 MIKEL MERINO GIVES SPAIN THE LEAD IN THE 88TH MINUTE! IT’S HIM ONCE AGAIN!
🇪🇸 Spain 2-1 Belgium 🇧🇪 pic.twitter.com/ir7L2xXLxM
— Caleb𓃵 (@CalebDesignsX) July 10, 2026
ಸ್ಪೇನ್‌ನ ಗೋಲ್‌ಕೀಪರ್ ಉನೈ ಸೈಮನ್ ವಿಶ್ವಕಪ್‌ನಲ್ಲಿ ಸತತ 650 ನಿಮಿಷಗಳ ಕಾಲ ಒಂದೂ ಗೋಲು ಬಿಟ್ಟುಕೊಡದೆ ದಾಖಲೆ ಬರೆದಿದ್ದರು. ಆದರೆ ಪಂದ್ಯದ 41ನೇ ನಿಮಿಷದಲ್ಲಿ ಬೆಲ್ಜಿಯಂನ ಚಾರ್ಲ್ಸ್ ಡಿ ಕೆಟೆಲೇರೆ ಹೆಡರ್ ಮೂಲಕ ಗೋಲು ಬಾರಿಸಿ ಸ್ಪೇನ್‌ನ ಈ ಐತಿಹಾಸಿಕ ದಾಖಲೆಯ ಓಟಕ್ಕೆ ಬ್ರೇಕ್ ಹಾಕಿದ್ದಲ್ಲದೆ, ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.
ಪಂದ್ಯದ 71ನೇ ನಿಮಿಷದಲ್ಲಿ ಬೆಲ್ಜಿಯಂನ ತಾರಾ ಗೋಲ್‌ಕೀಪರ್ ತಿಬೌಟ್ ಕೌರ್ಟೋಯಿಸ್ ಗಾಯಗೊಂಡು ಕಣ್ಣೀರು ಹಾಕುತ್ತಾ ಮೈದಾನದಿಂದ ಹೊರನಡೆದಿದ್ದು ಆ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು.
ಕೊನೆಯ ಕ್ಷಣಗಳಲ್ಲಿ ಬೆಲ್ಜಿಯಂನ ರೊಮೇಲು ಲುಕಾಕು ನೇತೃತ್ವದಲ್ಲಿ ಗೋಲು ಗಳಿಸಲು ತೀವ್ರ ಪ್ರಯತ್ನ ನಡೆಸಲಾಯಿತಾದರೂ, ಸ್ಪೇನ್‌ನ ಐಮೆರಿಕ್ ಲ್ಯಾಪೋರ್ಟೆ ಅದ್ಭುತವಾಗಿ ಚೆಂಡನ್ನು ಕ್ಲಿಯರ್ ಮಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಗೆಲುವಿನೊಂದಿಗೆ ಸ್ಪೇನ್ ತನ್ನ ಸತತ 37 ಪಂದ್ಯಗಳ ಅಜೇಯ ರೇಸ್ ಅನ್ನು ಮುಂದುವರಿಸಿದ್ದು, ಬೆಲ್ಜಿಯಂನ 18 ಪಂದ್ಯಗಳ ಅಜೇಯ ಓಟಕ್ಕೆ ತೆರೆ ಬಿದ್ದಿದೆ.
