ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳು ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಚಾಮರಾಜನಗರ (Chamarajanagara) ತಾಲ್ಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಯೊಬ್ಬರು ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿರೋದು ಆರೋಪಕ್ಕೆ ಪುಷ್ಟಿ ನೀಡಿದೆ.
ರಾಜ್ಯದ ದಕ್ಷಿಣ ತುದಿಯಲ್ಲಿರುವ ತಾಲ್ಲೂಕಾಗಿರುವುದರಿಂದ ಕೇರಳ ಮತ್ತು ತಮಿಳುನಾಡಿನ (Kerala – TamilNadu) ಕೊಂಡಿಯಾಗಿದೆ. ಇಲ್ಲಿನ ಅರಣ್ಯ ಪ್ರದೇಶ ಎರಡು ರಾಜ್ಯಗಳೊಂದಿಗೆ ವಿಸ್ತರಿಸಿಕೊಂಡಿದೆ. ತಮಿಳುನಾಡಿನ ಕಡೆ ಕೆಕ್ಕನಹಳ್ಳ ಹಾಗೂ ಕೇರಳದ ಕಡೆಗೆ ಮೂಲೆಹೊಳೆ ಎಂಬಲ್ಲಿ ಚೆಕ್‌ಪೋಸ್ಟ್‌ಗಳಿದ್ದು (Moolehole Check Post) ಅರಣ್ಯ ಹಾಗೂ ಪೊಲೀಸರು ಜಂಟಿಯಾಗಿ ತಪಾಸಣೆ ಮಾಡುತ್ತಾರೆ.

ಇಲ್ಲಿ ತಾಲ್ಲೂಕಿನಿಂದ ಹೊರ ರಾಜ್ಯದ ಕಡೆಗೆ ಮತ್ತು ಅಲ್ಲಿಂದ ತಾಲ್ಲೂಕಿನ ಕಡೆಗೆ ಬರುವ ಸಗಟು ಸಾಗಣೆ ವಾಹನಗಳು ಸೇರಿ ತಾಲ್ಲೂಕಿನಿಂದ ಕೇರಳ ಮತ್ತು ತಮಿಳುನಾಡಿನ ಕಡೆಗೆ ಹೋಗುವ ಖನಿಜ ಸಂಪತ್ತು ಸೇರಿ ತರಕಾರಿ ವಾಹನಗಳನ್ನ ತಪಾಸಣೆ ಮಾಡದೇ, ಹಣ ಮಾತ್ರ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದರೆ ಯಾವುದೇ ತಪಾಸಣೆ ಇಲ್ಲದೇ ವಾಹನಗಳು ಚೆಕ್‌ಪೋಸ್ಟ್ ದಾಟಿ ಹೋಗುತ್ತಿವೆ ಎನ್ನುವುದು ನಾಗರಿಕರ ಆರೋಪ.
ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಸಮವಸ್ತ್ರ ಧರಿಸದ ವ್ಯಕ್ತಿಯೊಬ್ಬರು ವಾಹನಗಳಿಂದ ಹಣ ವಸೂಲಿ ಮಾಡಿರುವುದು ಏಕೆ? ಈ ವ್ಯಕ್ತಿ ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿನಿತ್ಯ ನೂರಾರು ಟಿಪ್ಪರ್ ವಾಹನಗಳಲ್ಲಿ ಕಲ್ಲು ಮಣ್ಣು ಜೆಲ್ಲಿ ಸೇರಿ ಅನೇಕ ಖನಿಜ ಸಂಪತ್ತು ನೆರೆರಾಜ್ಯದ ಪಾಲಾಗುತ್ತಿದೆ. ಆದರೆ, ಚೆಕ್‌ಪೋಸ್ಟ್‌ಗಳಲ್ಲಿ ಪರ್ಮಿಟ್, ತೂಕವನ್ನು ಚೆಕ್ ಮಾಡದೆ ಹಣ ವಸೂಲಿಯಷ್ಟೆ ಮಾಡುತ್ತಿದ್ದಾರೆ. ಹಣ ನೀಡದಿದ್ದರೆ ತಪಾಸಣೆ ನೆಪದಲ್ಲಿ ತೊಂದರೆ ಮಾಡುತ್ತಾರೆ, ನಿಗದಿತ ಸಮಯದಲ್ಲಿ ಸರಕುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎಂಬ ಉದ್ದೇಶದಿಂದ ಹಣ ಬೇಕಾಗಿದೆ ಎಂದು ಚಾಲಕರು ಹೇಳಿಕೊಂಡಿದ್ದಾರೆ.
