– ಸಿನಿಮೀಯ ಸ್ಟೈಲ್‍ನಲ್ಲಿ ಅಟ್ಟಾಡಿಸಿ ಹತ್ಯೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ ಮಿತಿ ಮೀರಿದ್ದು, ನಡು ರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ರೌಡಿ ಶೀಟರ್ ತಮ್ಮ ಮಂಜ ಮತ್ತು ನವೀನ್ ಹತ್ಯೆಗೊಳಗಾದವರು. ಈ ಘಟನೆ ಜೆಪಿ ನಗರದ 24 ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ಪುಟ್ಟೇನಹಳ್ಳಿ ಜಂಕ್ಷನ್ 24ನೇ ಕ್ರಾಸ್ ನಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ನವೀನ್ ಕುಮಾರ್ ಕೊಲೆ ಮಾಡಿದರೆ, ಪುಟ್ಟೇನಹಳ್ಳಿ ಜಂಕ್ಷನ್ ಸಮೀಪದ ನಂದನಿ ಹೋಟೆಲ್ ಬಳಿ ತಮ್ಮ ಮಂಜನನ್ನು ಹಂತಕರು ಮುಗಿಸಿದ್ದಾರೆ.
Advertisement
Advertisement
ಸುಮಾರು 200 ಮೀಟರ್ ಅಂತರದಲ್ಲಿ ಹಂತಕರ ತಂಡ ಇಬ್ಬರನ್ನೂ ಕೊಚ್ಚಿ ಕೊಂದಿದೆ. ನವೀನ್ ಬಿಲ್ಡರ್ ಒಬ್ಬರ ಮಗನಾಗಿದ್ದು, ಭಾನುವಾರ ರಾತ್ರಿ ಮಂಜನ ಜೊತೆ ಊಟಕ್ಕೆ ಹೋಗಿದ್ದನು. ತಮ್ಮ ಮಂಜನ ವಿರುದ್ಧ ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಎರಡು ಕಡೆ ರೌಡಿ ಶೀಟ್ ಇದೆ. ಈ ಪೈಕಿ ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣ ಸಹ ಒಂದಾಗಿದೆ. ಸದ್ಯ, ಇದೇ ಪ್ರಕರಣದಲ್ಲಿ ಮೃತಪಟ್ಟ ಟ್ಯಾಬ್ಲೆಟ್ ರಘು ಕಡೆಯವರಿಂದಲೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದೆ.
Advertisement
ಸಿನಿಮೀಯ ರೀತಿಯಲ್ಲಿ 7-10 ಜನರ ಗುಂಪು ಸ್ಯಾಂಟ್ರೊ ಸ್ಪೋರ್ಟ್ಸ್ ಕಾರಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದು ಅಟ್ಯಾಕ್ ಮಾಡಿದೆ. ಕಾರಿನಲ್ಲಿ ಅಟ್ಟಾಡಿಸುವ ರಭಸಕ್ಕೆ ಲೈಟ್ ಕಂಬ ಮುರಿದು ಬಿದ್ದಿದೆ. ಬಳಿಕ ಮನಸ್ಸೋ ಇಚ್ಚೇ ಮಚ್ಚಿನೇಟು ನೀಡಿದೆ. ಲಾಂಗಿನೇಟಿಗೆ ಇಬ್ಬರೂ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
Advertisement
ಘಟನೆ ತಿಳಿದು ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳಾದ ಸೌತ್ ಡಿಸಿಪಿ ಡಾ.ರೋಹಿಣಿ ಸೆಪೆಟ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡುವಾಗ ಆಕ್ಸಿಡೆಂಟ್ ಆದ ಕಾರನ್ನು ಅಲ್ಲೆ ಬಿಡಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ ಕಾರು ವೀರಭಧ್ರಸ್ವಾಮಿ ಎಂಬವರ ಹೆಸರಿನಲ್ಲಿದೆ. ಘಟನೆ ನಡೆದ ಜಾಗದಲ್ಲಿ ಒಂದು ಪೀಠೋಪಕರಣ ಮಳಿಗೆ ಇದ್ದು, ಸಿಸಿ ಕ್ಯಾಮೆರಾ ಇದೆ. ಆದರೆ ಕಳೆದ 8 ದಿನಗಳಿಂದ ಕೆಲಸ ಮಾಡುತ್ತಿಲ್ಲ. ಪ್ರಕರಣದ ಸಂಬಂಧ ಸದ್ಯ ಜೆಪಿನಗರ ಮತ್ತು ಪುಟ್ಟೇನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ವೀಕೆಂಡ್ ಆದರೂ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಇಲ್ಲ. ಮುಖ್ಯರಸ್ತೆಯಲ್ಲಿ ಪೊಲೀಸರ ಗಸ್ತಿಲ್ಲ. ಇದರಿಂದಾಗಿಯೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.