Tuesday, 17th September 2019

ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್

ಬೆಂಗಳೂರು: ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ನಿಮ್ಮ ಮಾತುಗಳು ಎಂದು ಟ್ವೀಟ್ ಮಾಡುವ ಮೂಲಕ ಸಿಎಂ ಯಡಿಯೂರಪ್ಪ ಅವರ ಪುತ್ರ ಸಂಸದ ವಿಜಯೇಂದ್ರ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

ವರ್ಗಾವಣೆ ದಂಧೆ ಮಾಡಲು ಯಡಿಯೂರಪ್ಪ ಸ್ವತಃ ತಮ್ಮ ಸುಪುತ್ರನನ್ನೇ ಬಿಟ್ಟಿದ್ದಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ಕೊಟ್ಟಿರುವ ಅವರು ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವು ಎನ್ನುವುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರಸ್ವಾಮಿಯವರೇ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವು ಎನ್ನುವುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ನಿಮ್ಮ ಮಾತುಗಳು. ಸಿಬಿಐ ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ. ವಿಷಯಾಂತರಗೊಳಿಸಿ ಜನತೆಯ ದಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ಭಾನುವಾರ ಉಡುಪಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಅಂದರು. ಆದರೆ ಯಲಹಂಕ ತಹಶೀಲ್ದಾರ್ ಪೋಸ್ಟ್ ಗೆ ಎಷ್ಟು ವ್ಯವಹಾರ ಆಯ್ತು ಹೇಳಿ. ನಮಗೆ ವರ್ಗಾವಣೆ ಲೂಟಿ ಅಂತೀರಿ, ನೀವೇನು ಮಾಡುತ್ತಿದ್ದೀರಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪನವರು ಸುಪುತ್ರನನ್ನೇ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

Leave a Reply

Your email address will not be published. Required fields are marked *