ಬೆಂಗಳೂರು: ರಾಜಧಾನಿ ಬೆಂಗಳೂರನ್ನು (Bengaluru) ನಡುಗಿಸಿದ್ದ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದ (KR Puram Triple Murder Case) ತನಿಖೆ ವೇಳೆ ಹೂತುಹೋಗಿದ್ದ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ.
ಇಷ್ಟು ದಿನ ಪೊಲೀಸರ ಮುಂದೆ “ನಾನೇ ಎಲ್ಲರನ್ನೂ ಕೊಲೆ ಮಾಡಿದ್ದು, ಎಲ್ಲಾ ನನ್ನದೇ ತಪ್ಪು” ಎಂದು ತನ್ನ ಪ್ರೇಮಿ ಟೆಕ್ಕಿ ಕೆನೆತ್‌ನನ್ನು(Kenneth) ಬಚಾವ್ ಮಾಡಲು ಕಟ್ಟುಕಥೆ ಹೇಳುತ್ತಿದ್ದ ಶ್ವೇತಾ (Shwetha) ಈಗ ಪೊಲೀಸರ ತೀವ್ರ ವಿಚಾರಣೆಗೆ ಹೆದರಿ ಸಂಪೂರ್ಣ ಉಲ್ಟಾ ಹೊಡೆದಿದ್ದಾಳೆ. ತಾನು ಚಾಕುವನ್ನೇ ಮುಟ್ಟಿಲ್ಲ ಎಂದು ಇಡೀ ಕೊಲೆಯ ಪ್ಲಾನ್ ಅನ್ನು ಕೆನೆತ್ ತಲೆಗೆ ಕಟ್ಟುತ್ತಿದ್ದಾಳೆ.
ಪೊಲೀಸ್ ಕಸ್ಟಡಿಯಲ್ಲಿ ಶ್ವೇತಾ ನೀಡಿರುವ ಹೊಸ ಹೇಳಿಕೆ ಇಡೀ ತನಿಖೆಯ ದಿಕ್ಕನ್ನೇ ಬದಲಿಸಿದೆ. “ನನ್ನ ತಾಯಿಯನ್ನು ರಕ್ಕಸನಂತೆ ಚಾಕುವಿನಿಂದ ಮನಬಂದಂತೆ ಇರಿದು ಕೊಂದಿದ್ದು ಕೆನೆತ್. ನಾನು ಕೇವಲ ಬಾಗಿಲ ಬಳಿ ನಿಂತು ನೋಡುತ್ತಿದ್ದೆ ಅಷ್ಟೇ. ಚಾಕುವನ್ನು ನಾನು ಮುಟ್ಟೂ ಸಹ ಇಲ್ಲ. ನನ್ನ ತಂದೆ ಮತ್ತು ತಂಗಿಯನ್ನೂ ಸಹ ಅವನೇ ಕೊಂದಿದ್ದಾನೆ. ನಾನು ಕೊಲೆ ಮಾಡಿಲ್ಲ, ಏನೂ ತಿಳಿಯದೇ ಕೇವಲ ಕೆನೆತ್‌ಗೆ ಸಹಾಯ ಮಾಡಿದ್ದೇನೆ” ಎಂದು ಕಣ್ಣೀರು ಹಾಕುತ್ತಿದ್ದಾಳೆ.
ಮರಣೋತ್ತರ ಪರೀಕ್ಷೆಯ (Post-Mortem) ವರದಿ ಶ್ವೇತಾಳ ತಾಯಿಯ ಕೊಲೆ ಎಷ್ಟು ಕ್ರೂರವಾಗಿ ನಡೆದಿತ್ತು ಎಂಬುದನ್ನು ಬಿಚ್ಚಿಟ್ಟಿದೆ. ಶ್ವೇತಾಳ ತಾಯಿಯ ದೇಹದ ಮೇಲೆ ಬರೋಬ್ಬರಿ 22 ಬಾರಿ ಚಾಕುವಿನಿಂದ ಇರಿಯಲಾಗಿದೆ. ವಿಶೇಷವೆಂದರೆ, ಎಲ್ಲಾ ಇರಿತಗಳೂ ಒಂದೇ ಮಾದರಿಯಲ್ಲಿ (Same Pattern) ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಶ್ವೇತಾ ಪದೇ ಪದೇ ಹೇಳಿಕೆ ಬದಲಾಯಿಸುತ್ತಿರುವುದರಿಂದ ಸದ್ಯ ಪೊಲೀಸರು ಈ ಇರಿತಗಳು ಶ್ವೇತಾಳದ್ದಾ ಅಥವಾ ಕೆನೆತ್‌ನದ್ದಾ ಎಂಬ ಎರಡೂ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ಇದನ್ನೂ ಓದಿ: ಮಗ ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನ ಬರ್ಬರ ಹತ್ಯೆ – ಆರೋಪಿ ಅಂದರ್
ಮನೆಯಲ್ಲಿ ಮೂವರ ರಕ್ತದ ಮಡುವಿನ ಹೆಣಗಳನ್ನು ಬಿಸಾಡಿದ ಈ ನರಹಂತಕ ಜೋಡಿ, ಅದೇ ರಾತ್ರಿ ನಗರದಲ್ಲಿ ಮಧ್ಯರಾತ್ರಿಯವರೆಗೂ ಯಾವುದೇ ಭಯವಿಲ್ಲದೇ ಜಾಲಿಯಾಗಿ ಸುತ್ತಾಡಿದೆ. ಸಿಕ್ಕಿಬೀಳಬಾರದೆಂದು ಹೈವೇ ಬಿಟ್ಟು ಗಲ್ಲಿ ರಸ್ತೆಗಳು ಹಾಗೂ ಸಬ್ ರೋಡ್‌ಗಳ ಮೂಲಕ ಹೊಸೂರು ಮಾರ್ಗವಾಗಿ ಬೈಕ್‌ನಲ್ಲಿ ತಮಿಳುನಾಡಿನ ತಿರುವಣ್ಣಾಮಲೈ ತಲುಪಿದ್ದರು.
ಟ್ರ್ಯಾಕ್ ಮಾಡಬಾರದೆಂದು ಇಬ್ಬರೂ ಮೊಬೈಲ್ ಬಳಸದೇ, ಕೇವಲ 50 ಸಾವಿರ ರೂಪಾಯಿ ನಗದು ಹಣದೊಂದಿಗೆ ಪರಾರಿಯಾಗಿದ್ದರು. ತಿರುವಣ್ಣಾಮಲೈನಲ್ಲಿ ಬೈಕ್ ಬಿಟ್ಟು ಖಾಸಗಿ ಬಸ್ ಮೂಲಕ ಪಾಂಡಿಚೇರಿಗೆ ತೆರಳಿದ್ದ ಕೆನೆತ್ ಮತ್ತು ಶ್ವೇತಾ, ಅಲ್ಲಿ ಯಾವುದೇ ರೂಮ್ ಬುಕ್ ಮಾಡದೇ ಸಿಕ್ಕಿಬೀಳುವ ಭೀತಿಯಿಂದ ಬೀಚ್‌ಗಳು ಹಾಗೂ ಗಲ್ಲಿ ರಸ್ತೆಗಳಲ್ಲೇ ಅಲೆದಾಡುತ್ತಿದ್ದರು.
ಕೊಲೆ ಮಾಡಿದ ದಿನದಿಂದ ಬಂಧನವಾಗುವವರೆಗೂ ಕೆನೆತ್ ಸಂಪೂರ್ಣವಾಗಿ ಮದ್ಯದ ಮತ್ತಿನಲ್ಲೇ ತೇಲಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಕೆ.ಆರ್. ಪುರಂ ಪೊಲೀಸರು ಇಬ್ಬರನ್ನೂ ಮುಖಾಮುಖಿ ಕೂರಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಕೊಲೆಯ ಅಸಲಿ ಸತ್ಯ ಹೊರಬರಲಿದೆ.
