ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಕಾರಣದಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರು, ನಿರ್ಗತಿಕರು ಹಾಗೂ ರೈತರ ಬದುಕು ಅಸ್ತವ್ಯಸ್ತವಾಗಿದೆ.
ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದ ರೈತ ಕೆಂಪರಾಜು ಅವರು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದಾರೆ. ಈ ಗುತ್ತೆಗೆ ಪಡೆದ ಜಮೀನಿನಲ್ಲಿ ಚೆಂಡು ಹೂವು ಬೆಳೆದು, ಸರಿಯಾದ ಮಾರುಕಟ್ಟೆ ಇಲ್ಲದೇ ಕಂಗಾಲಾಗಿದ್ದಾರೆ. ಗುತ್ತಿಗೆ ಪಡೆದ 2 ಎಕ್ರೆ ಜಮೀನಿನಲ್ಲಿ 1 ಎಕ್ರೆ ಟೊಮೆಟೊ ಹಾಗೂ ಮತ್ತೊಂದು ಎಕ್ರೆಯಲ್ಲಿ ಚೆಂಡು ಹೂವುಗಳನ್ನು ಬೆಳೆದಿದ್ದಾರೆ. ಪ್ರತಿ ವರ್ಷ ಬಸವ ಜಯಂತಿ ಸೀಸನ್ ವೇಳೆಯಲ್ಲಿ ಚೆಂಡು ಹೂವು ಬೆಳೆದು ಮಾರುಕಟ್ಟೆಗೆ ನೀಡುತ್ತಿದ್ದ ರೈತ ಕೆಂಪರಾಜು ಅವರಿಗೆ ಈ ವರ್ಷ ಮಾರುಕಟ್ಟೆಯೇ ಇಲ್ಲದಂತಾಗಿದೆ.
Advertisement
Advertisement
ರೈತ ತಮ್ಮ 1 ಎಕ್ರೆ ಜಮೀನಿನಲ್ಲಿ ಚೆಂಡು ಹೂವು ಬೆಳೆಸಲು ಸುಮಾರು 70 ಸಾವಿರದಿಂದ 80 ಸಾವಿರದವರೆಗೆ ಖರ್ಚು ಮಾಡಿದ್ದಾರೆ. ಸಸಿ ಒಂದಕ್ಕೆ 3 ರೂ. ಬೆಲೆಯಿದ್ದು ಒಂದು ಎಕ್ರೆಯಲ್ಲಿ 10 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಆದರೆ ದೇಶದಲ್ಲಿ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದ ಸೂಕ್ತ ಮಾರುಕಟ್ಟೆ ಇಲ್ಲದೇ ರೈತ ಕಂಗಾಲಾಗಿದ್ದಾರೆ.
Advertisement
ಈಗಾಗಲೇ ರೈತ ಸಂಪರ್ಕ ಕೇಂದ್ರಕ್ಕೆ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಕೆಂಪರಾಜು ಅವರು ಕರೆ ಮಾಡಿದ್ದು, ಇವರು ಮಾಡಿದ ಕೆರೆಗಳಿಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಂದಾಗಲಿ ಅಥವಾ ಸರಕಾರದಿಂದಾಗಲಿ ಸೂಕ್ತ ಪರಿಹಾರ ದೊರಕಿಸಿಕೊಡಿ ಎಂದು ರೈತ ಮನವಿ ಮಾಡಿಕೊಂಡಿದ್ದಾರೆ.
Advertisement
ಈ ಬಗ್ಗೆ ಮಾತನಾಡಿದ ಕೆಂಪರಾಜು ಅವರು, ನಮ್ಮಂತಹ ಅದೆಷ್ಟೋ ರೈತರಿಗೆ ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ರೈತ ದೇಶದ ಬೆನ್ನೆಲುಬು ಎನ್ನುವ ಸಮಾಜ ಹಾಗೂ ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ವಹಿಸದೆ ತಟಸ್ಥವಾಗಿರುವುದು ಸರಿಯಲ್ಲ. ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನೆರವು ನೀಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಸಮಾಜಕ್ಕೆ ಅನ್ನ ನೀಡುವ ರೈತನ ಬದುಕೇ ಹೀಗಾದ್ರೆ ಗತಿಯೇನು ಎಂಬ ಆತಂಕ ಸೃಷ್ಟಿಯಾಗಿದ್ದು, ಇನ್ನಾದರೂ ಸರ್ಕಾರ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಾಲ ಸೋಲ ಮಾಡಿ, ಬೆಳೆ ಬೆಳೆದು, ಸಮಾಜಕ್ಕೆ ಅನ್ನ ನೀಡುವ ರೈತನ ಬದುಕಿಗೆ ಬೆಳಕಾಗುವ ಮೂಲಕ ಬೆಳೆಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕಿದೆ.