ನವದೆಹಲಿ: ದೇಶದ ಆರ್ಥಿಕ (Economy) ಭದ್ರತೆಯನ್ನು ಗಟ್ಟಿಗೊಳಿಸಲು ಮತ್ತು ವಿದೇಶಗಳಿಗೆ ಹರಿದುಹೋಗುತ್ತಿರುವ ಲಕ್ಷಾಂತರ ಕೋಟಿ ರೂಪಾಯಿಗಳ ‘ಡಾಲರ್’ ಹೊರಹರಿವಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈಗ ‘ಉಳಿತಾಯದ ಮಹಾ ಅಭಿಯಾನ’ಕ್ಕೆ ಕರೆ ನೀಡಿದ್ದಾರೆ.
ಪ್ರಸ್ತುತ ಜಾಗತಿಕ ಯುದ್ಧದ ವಾತಾವರಣದಲ್ಲಿ ರಸಗೊಬ್ಬರ ಮತ್ತು ಇಂಧನ ಬೆಲೆಗಳು ಗಗನಕ್ಕೇರಿದ್ದರೂ, ಸರ್ಕಾರವು ಆ ಹೊರೆಯನ್ನು ಹೊತ್ತು ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ನೀಡುತ್ತಿದೆ. ಈ ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ಉಳಿತಾಯದ ಮೂಲಕ ಸಹಕರಿಸಬೇಕು. ಸಾರ್ವಜನಿಕರು ತಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮೋದಿ ಅವರು ಮನವಿ ಮಾಡಿದ್ದಾರೆ.
ನಮೋ ಉಳಿತಾಯದ ಮಂತ್ರ
ಪೆಟ್ರೋಲ್ (Petrol) ಮತ್ತು ಡೀಸೆಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಸಾರ್ವಜನಿಕ ಸಾರಿಗೆಯನ್ನು (ಬಸ್, ಮೆಟ್ರೋ) ಹೆಚ್ಚಾಗಿ ಬಳಸಿ ಮತ್ತು ಸಾಧ್ಯವಿರುವ ಕಡೆ ವರ್ಕ್ ಫ್ರಮ್ ಹೋಮ್ (WFH) ಮಾದರಿಯನ್ನು ಅನುಸರಿಸಿ. ಅನಗತ್ಯವಾಗಿ ಚಿನ್ನ (Gold) ಖರೀದಿ ಮಾಡುವುದನ್ನು ತಪ್ಪಿಸಿ. ಇದು ದೇಶದ ಅತಿ ದೊಡ್ಡ ಆಮದು ವೆಚ್ಚಗಳಲ್ಲಿ ಒಂದಾಗಿದೆ.
ವಿದೇಶದಿಂದ ಆಮದಾಗುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ. ಅಡುಗೆ ಎಣ್ಣೆಯ ಬಳಕೆಯನ್ನು ಮಿತಗೊಳಿಸಿ ಆರೋಗ್ಯ ಕಾಪಾಡಿಕೊಳ್ಳಿ ಹಾಗೂ ಕೃಷಿಯಲ್ಲಿ ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಿ. ಇದನ್ನೂ ಓದಿ: ತೈಲ ಕಂಪನಿಗಳಿಗೆ 1 ಲಕ್ಷ ಕೋಟಿ ನಷ್ಟ – ಶೀಘ್ರವೇ ದರ ಏರಿಕೆ?

ದೇಶಕ್ಕಾಗುವ ಲಾಭ ಎಷ್ಟು?
ಈ ಮಹಾ ಅಭಿಯಾನದ ಹಿಂದೆ ಸುಮಾರು 23 ಲಕ್ಷ ಕೋಟಿ ರೂಪಾಯಿಗಳ ಬೃಹತ್ ವೆಚ್ಚವನ್ನು ತಗ್ಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಭಾರತದ ಒಟ್ಟು ಆಮದು ವೆಚ್ಚದಲ್ಲಿ ಚಿನ್ನದ ಪಾಲು ಶೇ. 10ರಷ್ಟಿದೆ. ಚೀನಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. 2026ರ ಅಂದಾಜಿನ ಪ್ರಕಾರ, ಭಾರತವು ಸುಮಾರು 6.76 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಜನರು ಚಿನ್ನದ ಖರೀದಿಯನ್ನು ಕಡಿಮೆ ಮಾಡಿದರೆ, ದೇಶಕ್ಕೆ ವಾರ್ಷಿಕ 2 ರಿಂದ 3 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ. ಇದರಿಂದ ಡಾಲರ್ ಹೊರಹರಿವು ಗಣನೀಯವಾಗಿ ತಗ್ಗುತ್ತದೆ.
ಸದ್ಯ ಭಾರತವು ವಾರ್ಷಿಕ 17 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧಗಳ ಕಾರಣದಿಂದ ತೈಲ ಬೆಲೆ ಗಗನಕ್ಕೇರಿದೆ. ಇಂಧನ ಬಳಕೆ ಕಡಿಮೆ ಮಾಡುವುದರಿಂದ ಈ ಆಮದು ಹೊರೆಯನ್ನು ತಗ್ಗಿಸಿ, ವಿದೇಶಿ ವಿನಿಮಯವನ್ನು ಉಳಿಸಬಹುದು.
2026ರಲ್ಲಿ ಭಾರತವು 1.83 ಲಕ್ಷ ಕೋಟಿ ರೂ. ಮೌಲ್ಯದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದರ ಬಳಕೆಗೆ ಕತ್ತರಿ ಹಾಕುವುದರಿಂದ ಆರ್ಥಿಕ ಲಾಭದ ಜೊತೆಗೆ ಆರೋಗ್ಯವೂ ವೃದ್ಧಿಸುತ್ತದೆ. ಈ ವರ್ಷ ಸುಮಾರು 1.34 ಲಕ್ಷ ಕೋಟಿ ರೂ. ಮೌಲ್ಯದ ರಸಗೊಬ್ಬರ ಆಮದಾಗುತ್ತಿದೆ. ಸಾವಯವ ಕೃಷಿಗೆ ಒತ್ತು ನೀಡಿದರೆ ಈ ಬೃಹತ್ ಮೊತ್ತ ದೇಶದ ಬೊಕ್ಕಸದಲ್ಲೇ ಉಳಿಯಲಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಿ, 1 ವರ್ಷ ಚಿನ್ನ ಖರೀದಿಸಬೇಡಿ: ಮೋದಿ ಮಾತಿನ ಉದ್ದೇಶವೇನು?
ಆಮದು ತಗ್ಗಿಸಿದರೆ ಲಾಭ ಏನು?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ‘ಅಮೆರಿಕನ್ ಡಾಲರ್’ ಸಾರ್ವತ್ರಿಕ ಕರೆನ್ಸಿಯಾಗಿದೆ. ಭಾರತವು ವಿದೇಶದಿಂದ ಕಚ್ಚಾ ತೈಲ(Crude Oil) ಅಥವಾ ಚಿನ್ನವನ್ನು (Gold) ಆಮದು ಮಾಡಿಕೊಂಡಾಗ, ಅದಕ್ಕೆ ಪ್ರತಿಯಾಗಿ ಡಾಲರ್‌ಗಳಲ್ಲೇ ಪಾವತಿ ಮಾಡಬೇಕಾಗುತ್ತದೆ.
ನಾವು ಎಷ್ಟು ಹೆಚ್ಚು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತೇವೆಯೋ, ಅಷ್ಟು ಹೆಚ್ಚು ಡಾಲರ್ ನಮಗೆ ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಡಾಲರ್ ಬೇಡಿಕೆ ಹೆಚ್ಚಾದಾಗ ರೂಪಾಯಿಯ ಎದುರು ಡಾಲರ್ ಮೌಲ್ಯ ಏರಿಕೆಯಾಗುತ್ತದೆ. ಡಾಲರ್ ಬೆಲೆ ಏರಿಕೆಯಾದರೆ, ನಾವು ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ಉದಾಹರಣೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿದ್ದರೂ, ಡಾಲರ್ ಎದುರು ರೂಪಾಯಿ ದುರ್ಬಲಗೊಂಡರೆ ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತದೆ.

ನಾವು ಆಮದನ್ನು ಕಡಿಮೆ ಮಾಡಿದರೆ ಡಾಲರ್ ಮೇಲಿನ ಅವಲಂಬನೆ ತಗ್ಗುತ್ತದೆ. ಇದರಿಂದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಬೇಡಿಕೆ ಹೆಚ್ಚಾಗಿ, ಅದರ ಮೌಲ್ಯ ಸ್ಥಿರಗೊಳ್ಳುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ರೂಪಾಯಿ ಬಲಿಷ್ಠವಾಗುತ್ತದೆ.
ಆಮದು ವೆಚ್ಚ ಕಡಿಮೆಯಾದಷ್ಟೂ ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಾಗುತ್ತದೆ. ಇದು ದೇಶದ ಆರ್ಥಿಕ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಆಮದು ವಸ್ತುಗಳ ಬೆಲೆ ಇಳಿಕೆಯಾದಾಗ, ಸಾರಿಗೆ ಮತ್ತು ಉತ್ಪಾದನಾ ವೆಚ್ಚ ತಗ್ಗುತ್ತದೆ. ಇದು ನೇರವಾಗಿ ಸಾಮಾನ್ಯ ಜನರ ಮೇಲಿನ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಾಡುತ್ತದೆ.
ವಿದೇಶಿ ಆಮದು ಅವಲಂಬನೆ ಕಡಿಮೆಯಾದಷ್ಟೂ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಗೌರವ ಹೆಚ್ಚುತ್ತದೆ. ನಮ್ಮ ಉಳಿತಾಯವು ಕೇವಲ ವೈಯಕ್ತಿಕ ಲಾಭವಲ್ಲ, ಅದು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರತಿಯೊಬ್ಬ ಭಾರತೀಯನು ಮಾಡುವ ಸಣ್ಣ ಉಳಿತಾಯವು ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು (Foreign Exchange Reserves) ಹೆಚ್ಚಿಸಲು ನೆರವಾಗುತ್ತದೆ. ಈ ಅಭಿಯಾನವು ಕೇವಲ ವ್ಯಕ್ತಿಯ ಉಳಿತಾಯವಲ್ಲ, ಬದಲಾಗಿ ಭಾರತವನ್ನು ‘ಆತ್ಮನಿರ್ಭರ’ ಮಾಡುವತ್ತ ಇಟ್ಟಿರುವ ದೊಡ್ಡ ಹೆಜ್ಜೆಯಾಗಿದೆ ಎಂದು ಮೋದಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

