ನವದೆಹಲಿ: ಭಾರತದ(India) ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಳೆದ 10 ವಾರಗಳಲ್ಲಿ ಅಂದಾಜು 1 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.
ಅಮೆರಿಕ ಮತ್ತು ಇರಾನ್ (US-Iran War) ನಡುವಿನ ಸಂಘರ್ಷ ಹಾಗೂ ರಷ್ಯಾ-ಉಕ್ರೇನ್ (Russia- Ukraine) ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದೆ.
ಜಾಗತಿಕವಾಗಿ ಬೆಲೆ ಏರಿಕೆಯಾಗಿದ್ದರೂ, ಭಾರತದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸದೆ ಸ್ಥಿರವಾಗಿ ಕಾಯ್ದುಕೊಂಡಿವೆ. ಇದರಿಂದಾಗಿ ಕಂಪನಿಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಪ್ರಸ್ತುತ ಈ ಕಂಪನಿಗಳು ಪ್ರತಿದಿನ ಅಂದಾಜು 1,600 ರಿಂದ 1,700 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 18 ರಿಂದ 21 ರೂ. ಮತ್ತು ಡೀಸೆಲ್ ಮೇಲೆ 28 ರಿಂದ 35 ರೂ. ವರೆಗೆ ನಷ್ಟವಾಗುತ್ತಿದೆ.
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿರುವುದರಿಂದ ತೈಲ ಆಮದು ವೆಚ್ಚ ಮತ್ತಷ್ಟು ಹೆಚ್ಚಾಗುತ್ತಿದೆ. ಯುದ್ಧದ ಕಾರಣದಿಂದಾಗಿ ಹಡಗುಗಳ ಮಾರ್ಗ ಬದಲಾವಣೆ ಮತ್ತು ವಿಮಾ ಕಂತುಗಳ ಏರಿಕೆಯಿಂದಾಗಿ ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಿ, 1 ವರ್ಷ ಚಿನ್ನ ಖರೀದಿಸಬೇಡಿ: ಮೋದಿ ಮಾತಿನ ಉದ್ದೇಶವೇನು?

ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು (Excise Duty) ಕಡಿತಗೊಳಿಸುವ ಮೂಲಕ ಕಂಪನಿಗಳ ಮೇಲಿನ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಲು ಪ್ರಯತ್ನಿಸಿದೆ. ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 10 ರೂ. ಅಬಕಾರಿ ಸುಂಕವನ್ನು ಕಡಿತ ಮಾಡಲಾಗಿದೆ. ಈ ಸುಂಕ ಕಡಿತವಿಲ್ಲದಿದ್ದರೆ ಕಂಪನಿಗಳ ಒಟ್ಟು ನಷ್ಟವು 62,500 ಕೋಟಿ ರೂ. ದಾಟುತ್ತಿತ್ತು ಎಂದು ಅಂದಾಜಿಸಲಾಗಿದೆ.
ಜಾಗತಿಕವಾಗಿ ಇಂಧನ ಬೆಲೆಗಳು ಅಮೆರಿಕ(45%) ಸ್ಪೇನ್ (34%), ಜಪಾನ್ (30%) ಮತ್ತು ಜರ್ಮನಿ (27%) ಅಂತಹ ದೇಶಗಳಲ್ಲಿ ಭಾರಿ ಏರಿಕೆಯಾಗಿದ್ದರೂ ಭಾರತದಲ್ಲಿ ದರಗಳನ್ನು ಸ್ಥಿರವಾಗಿಡುವ ಮೂಲಕ ಹಣದುಬ್ಬರ ಏರದಂತೆ ತಡೆಯಲಾಗಿದೆ.
ಕೆಂಪು ಸಮುದ್ರ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಹಡಗುಗಳ ಮಾರ್ಗ ಬದಲಾಗಿದ್ದು, ವಿಮಾ ಕಂತುಗಳು ಮತ್ತು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಿದೆ. ಈ ಹಿಂದೆ ರಷ್ಯಾದಿಂದ ಸಿಗುತ್ತಿದ್ದ ಭಾರೀ ರಿಯಾಯಿತಿಗಳು ಈಗ ಕಡಿಮೆಯಾಗುತ್ತಿರುವುದು ಕಂಪನಿಗಳ ಆಮದು ವೆಚ್ಚವನ್ನು ಹೆಚ್ಚಿಸಿದೆ. ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡಿ: ದೇಶದ ಜನತೆಗೆ ಮೋದಿ ಸಲಹೆ
ಶೀಘ್ರವೇ ಏರಿಕೆ?
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಭಾರತದಲ್ಲಿ ತೈಲ ದರ ಏರಿಕೆಯಾಗದೇ ಇದ್ದರೂ ಶೀಘ್ರವೇ ದರ ಏರಿಕೆಯಾಗುವ ಸಾಧ್ಯತೆಯಿದೆ. ನಷ್ಟದ ಪ್ರಮಾಣವನ್ನು ಆಧರಿಸಿ ಮುಂದಿನ ದಿನಗಳಲ್ಲಿ ಲೀಟರ್‌ಗೆ 4 ರಿಂದ 5 ರೂ. ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

