Monday, 16th December 2019

Recent News

‘ದ್ರಾವಿಡ್‍ಗೆ ಅವಮಾನ’ – ಬಿಸಿಸಿಐ ವಿರುದ್ಧ ಹರ್ಭಜನ್ ಸಿಂಗ್ ಕಿಡಿ

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ನೋಟಿಸ್ ನೀಡಿರುವ ಕ್ರಮವನ್ನು ಹರ್ಭಜನ್ ಸಿಂಗ್ ಟೀಕಿಸಿದ್ದಾರೆ.

ರಾಹುಲ್ ಅವರಿಗೆ ನೋಟಿಸ್ ನೀಡಿರುವ ಕುರಿತು ಸೌರವ್ ಗಂಗೂಲಿ ಮೊದಲು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್, ನಿಜವಾಗಲು? ಈ ಪ್ರಕ್ರಿಯೆ ಎಲ್ಲಿಗೆ ದಾರಿ ಮಾಡಿಕೊಡುತ್ತಿದೆ. ಭಾರತ ಕ್ರಿಕೆಟಿನಲ್ಲಿ ದ್ರಾವಿಡ್ ಅತ್ಯುತ್ತಮ ವ್ಯಕ್ತಿ. ಇಂತಹ ಲೆಜೆಂಡ್ ಆಟಗಾರರಿಗೆ ನೋಟಿಸ್ ನೀಡುವುದು ಅವರಿಗೆ ಮಾಡಿದ ಅವಮಾನವಾಗುತ್ತದೆ. ಕ್ರಿಕೆಟ್‍ಗೆ ಅವರ ಸೇವೆಯ ಅಗತ್ಯವಿದೆ. ಆ ದೇವರೇ ಕ್ರಿಕೆಟನ್ನು ಕಾಪಾಡಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿ ಬಿಸಿಸಿಐ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ಸೌರವ್ ಗಂಗೂಲಿ, ಭಾರತದ ಕ್ರಿಕೆಟ್‍ನಲ್ಲಿ ‘ಸ್ವಹಿತಾಸಕ್ತಿ ಸಂಘರ್ಷ’ ಎಂದು ನೋಟಿಸ್ ನೀಡುವುದು ಹೊಸ ಫ್ಯಾಷನ್ ಆಗಿದ್ದು, ಬಿಸಿಸಿಐಗೆ ಸುದ್ದಿಯಾಗಲು ಇದಕ್ಕಿಂತ ಒಳ್ಳೆಯ ಮಾರ್ಗ ದೊರೆಯಲಿಲ್ಲವೇ ಎಂದಿದ್ದರು.

ರಾಹುಲ್ ದ್ರಾವಿಡ್ ಅವರು ಬೆಂಗಳೂರಿನಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ನಿರ್ದೇಶಕರಾಗಿದ್ದು, ಅವರು ಐಪಿಎಲ್ ಫ್ರಾಂಚೈಸಿ ಸಿಎಸ್‍ಕೆ ಮಾಲೀಕತ್ವದ ಇಂಡಿಯಾ ಸಿಮೆಂಟ್ ಗ್ರೂಪ್ ನಲ್ಲಿ ಉಪಾಧ್ಯಕ್ಷ ಹುದ್ದೆ ಹೊಂದಿದ್ದಾರೆ ಎಂದು ಬಿಸಿಸಿಐ ನೋಟಿಸ್ ಜಾರಿ ಮಾಡಿದೆ. ಮಧ್ಯ ಪ್ರದೇಶ ಕ್ರಿಕೆಟ್ ಬೋರ್ಡಿನ ಸದಸ್ಯರಾಗಿರುವ ಸಂಜೀವ್ ಗುಪ್ತಾ ಅವರು ಬಿಸಿಸಿಐಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಬಿಸಿಸಿಐ ನೀತಿ ಸಂಹಿತೆ ಅಧಿಕಾರಿ ಡಿಕೆ ಜೈನ್ ಅವರು ದ್ರಾವಿಡ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ದ್ರಾವಿಡ್ ಅವರಿಗೆ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಜೈನ್ ಅವರು, ಸ್ವಹಿತಾಸಕ್ತಿ ಸಂಘರ್ಷ ಸಂಬಂಧ ದೂರು ಸ್ವೀಕರಿಸಿ ರಾಹುಲ್ ದ್ರಾವಿಡ್ ಅವರಿಗೆ ನೋಟಿಸ್ ನೀಡಿದ್ದೇನೆ. ನೋಟಿಸ್‍ಗೆ ಉತ್ತರಿಸಲು ದ್ರಾವಿಡ್ ಅವರು 2 ವಾರಗಳ ಕಾಲಾವಕಾಶ ಕೋರಿದ್ದಾರೆ. ಅವರು ಉತ್ತರ ನೀಡಿದ ಬಳಿಕ ಮುಂದಿನ ತೀರ್ಮಾನ ಮಾಡಲಾವುದು ಎಂದಿದ್ದಾರೆ.

ರಾಹುಲ್ ವಿರುದ್ಧ ದೂರು ನೀಡಿರುವ ಗುಪ್ತಾ ಅವರು, ಸ್ವಹಿತಾಸಕ್ತಿ ಸಂಘರ್ಷ ಸಂಬಂಧ ಈ ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ವಿರುದ್ಧವೂ ಬಿಸಿಸಿಐಗೆ ದೂರು ನೀಡಿದ್ದರು. ಇಬ್ಬರು ಆಟಗಾರರು ಕೂಡ ಐಪಿಎಲ್ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಹೈದರಾಬಾದ್ ತಂಡದ ಪರ ಹುದ್ದೆಯಲಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಈ ದೂರಿಗೆ ಪ್ರತಿಕ್ರಿಯೆ ನೀಡಿದ್ದ ಸಚಿನ್ ಅವರು ತಾನು ಮುಂಬೈ ತಂಡದಿಂದ 1 ರೂ.ವನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಗಂಗೂಲಿ ಅವರು ಕೂಡ ಬಂಗಾಳ ಕ್ರಿಕೆಟ್ ಬೋರ್ಡ್ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.

Leave a Reply

Your email address will not be published. Required fields are marked *