ಬಳ್ಳಾರಿ: ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ(Sri Krishnadevaraya University) ಪರೀಕ್ಷಾಂಗ ವಿಭಾಗದಲ್ಲಿ ವರ್ಷಗಳಿಂದ ನಡೆಯುತ್ತಿದ್ದ ನಕಲಿ ಘಟಿಕೋತ್ಸವ(Convocation) ಪ್ರಮಾಣ ಪತ್ರ ದಂಧೆ ಹಾಗೂ ಲಕ್ಷಾಂತರ ರೂಪಾಯಿ ಹಣದ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆ ನೌಕರರ ಮೇಲೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎಂ.ಎನ್. ಸಾಲಿ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಪರೀಕ್ಷಾಂಗ ವಿಭಾಗದ ಹೊರಗುತ್ತಿಗೆ ನೌಕರರಾದ ಮಹಂತೇಶ್ ವೈ (40) ಮತ್ತು ಹನುಮೇಶ್ ಸೂಡಿ (35) ಎಂಬುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಈ ಬೃಹತ್ ಹಗರಣ (Scam) ಬೆಳಕಿಗೆ ಬಂದು ಹಲವು ತಿಂಗಳುಗಳೇ ಕಳೆದಿದ್ದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ವಿವಿ ಆಡಳಿತ ಮಂಡಳಿ ತೀವ್ರ ವಿಳಂಬ ಧೋರಣೆ ಅನುಸರಿಸುತ್ತಿತ್ತು. ವಿವಿಯ ಈ ಮೌನ ಮತ್ತು ವೀನಾಮೇಷ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಈ ವ್ಯವಸ್ಥಿತ ವಂಚನೆಯ ಕುರಿತು ‘ಪಬ್ಲಿಕ್ ಟಿವಿ’ ದಾಖಲೆ ಸಮೇತ ಸವಿಸ್ತಾರವಾದ ತನಿಖಾ ವರದಿಯನ್ನು ಪ್ರಸಾರ ಮಾಡಿತ್ತು. ವರದಿ ಬಿಡುಗಡೆಯಾಗಿ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದಂತೆಯೇ ವಿವಿ ಅಧಿಕಾರಿಗಳು, ತರಾತುರಿಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮಾರ್ಕ್ಸ್ ಕಾರ್ಡ್ ದಂಧೆಯ ಸ್ಫೋಟಕ ಸತ್ಯ ಬಯಲು – ಕೃಷ್ಣದೇವರಾಯ ವಿವಿ ಕುಲಪತಿ ಮುಂದೆಯೇ ಮಧ್ಯವರ್ತಿ ಆಡಿಯೋ ಬಾಂಬ್!
ಬಯಲಿಗೆ ಬಂದಿದ್ದು ಹೇಗೆ?
ಆರೋಪಿಗಳಾದ ಮಹಾಂತೇಶ್ 2012 ರಿಂದ ಹಾಗೂ ಹನುಮೇಶ್ 2022 ರಿಂದ ವಿವಿಯ ಪರೀಕ್ಷಾಂಗ ವಿಭಾಗದಲ್ಲಿ ನಂಬಿಕಸ್ಥರಾಗಿ ಕೆಲಸ ಮಾಡುತ್ತಿದ್ದರು. ಆದರೆ ಇದನ್ನು ದುರುಪಯೋಗಪಡಿಸಿಕೊಂಡ ಇಬ್ಬರು, ಘಟಿಕೋತ್ಸವ ಸರ್ಟಿಫಿಕೇಟ್ ಪಡೆಯಲು ಬರುತ್ತಿದ್ದ ನಿರಪರಾಧಿ ವಿದ್ಯಾರ್ಥಿಗಳಿಂದ ನೇರವಾಗಿ ಹಣ ಪಡೆದು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದರು.
ಕಳೆದ 2025ರ ಫೆಬ್ರವರಿಯಲ್ಲಿ ವಿದ್ಯಾರ್ಥಿಯೊಬ್ಬ ತಾನು ಬರೋಬ್ಬರಿ 8,500 ರೂಪಾಯಿ ಶುಲ್ಕ ಪಾವತಿಸಿದ್ದರೂ ತನಗೆ ಇನ್ನು ಘಟಿಕೋತ್ಸವ ಸರ್ಟಿಫಿಕೇಟ್ ಸಿಕ್ಕಿಲ್ಲ ಎಂದು ವಿವಿಗೆ ಲಿಖಿತ ದೂರು ನೀಡಿದ್ದ. ಈ ದೂರಿನ ಬೆನ್ನಲ್ಲೇ ತನಿಖೆ ನಡೆಸಿದಾಗ ಇಡೀ ಹಗರಣದ ಕರಾಳ ಮುಖ ಬಯಲಾಗಿದೆ.
ಆರೋಪಿಗಳು ವಿದ್ಯಾರ್ಥಿಗಳಿಗೆ ನಕಲಿ ಘಟಿಕೋತ್ಸವ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ವಿತರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದಕ್ಕಾಗಿ ಇವರು ವಿವಿಯ ಕಂಪ್ಯೂಟರ್ ವ್ಯವಸ್ಥೆ, ಅಧಿಕೃತ ದಾಖಲೆಗಳು ಹಾಗೂ ಸ್ವತಃ ವಿಶ್ವವಿದ್ಯಾಲಯದ ಕುಲಪತಿಗಳು (VC) ಸೇರಿದಂತೆ ಹಲವು ಉನ್ನತ ಅಧಿಕಾರಿಗಳ ಸಹಿಯನ್ನು ನಕಲು (Forge) ಮಾಡಿರುವುದು ಪತ್ತೆಯಾಗಿತ್ತು,
ವಿವಿಯ ಪ್ರಾಥಮಿಕ ತನಿಖೆಯಲ್ಲಿ ಈ ಇಬ್ಬರು ಆರೋಪಿಗಳು ಕನಿಷ್ಠ 4 ಲಕ್ಷಕ್ಕೂ ಅಧಿಕ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಪ್ರಕರಣದ ಗಾಂಭೀರ್ಯತೆ ಅರಿತು ನಡೆಸಲಾದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಸಮಗ್ರ ತನಿಖೆಯಲ್ಲಿ ಆಘಾತಕಾರಿ ಸತ್ಯ ಹೊರಬಿದ್ದಿದೆ. ಕೇವಲ ಸರ್ಟಿಫಿಕೇಟ್ ಹೆಸರಲ್ಲೇ ಮುಖ್ಯ ಆರೋಪಿ ಮಹಾಂತೇಶ್ ಖಾತೆಗೆ ಬರೋಬ್ಬರಿ 18 ಲಕ್ಷಕ್ಕೂ ಅಧಿಕ ಹಣ ಜಮೆಯಾಗಿದೆ. ಅಷ್ಟೇ ಅಲ್ಲದೆ, 2020 ಮತ್ತು 2022 ರ ಅವಧಿಯಲ್ಲೇ ಸುಮಾರು 4,476 ಅಧಿಕೃತ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಭಾರೀ ಅಕ್ರಮ ಮತ್ತು ದುರುಪಯೋಗ ನಡೆದಿರುವುದು ನ್ಯಾಯಾಧೀಶರ ತನಿಖಾ ವರದಿಯಿಂದ ಬಟಾಬಯಲಾಗಿದೆ.
ವಿಶ್ವವಿದ್ಯಾಲಯದ ಕಂಪ್ಯೂಟರ್ ನೆಟ್‌ವರ್ಕ್ ಮತ್ತು ಇಷ್ಟೊಂದು ದೊಡ್ಡ ಪ್ರಮಾಣದ ಸರ್ಟಿಫಿಕೇಟ್ ಹಾಗೂ ಸಹಿಗಳನ್ನು ಕೇವಲ ಇಬ್ಬರು ಗುತ್ತಿಗೆ ನೌಕರರು ಮಾತ್ರವೇ ದುರುಪಯೋಗಪಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಗರಣದಲ್ಲಿ ವಿವಿಯ ಒಳಗಿನ ಕೆಲವು ಪ್ರಭಾವಿ ಅಧಿಕಾರಿಗಳು ಹಾಗೂ ಕಾಯಂ ಸಿಬ್ಬಂದಿಗಳ ಹಸ್ತಕ್ಷೇಪವೂ ಇರುವ ಭಾರೀ ಸಂಶಯ ವ್ಯಕ್ತವಾಗಿದೆ.
ವಿವಿ ಆಡಳಿತ ಮಂಡಳಿ ಕೇವಲ ಇಬ್ಬರು ಕೆಳಹಂತದ ಹೊರಗುತ್ತಿಗೆ ನೌಕರರ ಮೇಲೆ ಮಾತ್ರ ಕೇಸ್ ದಾಖಲಿಸಿ ಕೈತೊಳೆದುಕೊಂಡಿರುವುದು, ಅಸಲಿ ಕಿಂಗ್‌ಪಿನ್‌ಗಳನ್ನು ಮತ್ತು ದೊಡ್ಡ ತಲೆಗಳನ್ನು ರಕ್ಷಿಸುವ ವ್ಯವಸ್ಥಿತ ಸಂಚು ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪೊಲೀಸ್ ತನಿಖೆ ತೀವ್ರಗೊಂಡರೆ ಮಾತ್ರ ಅಸಲಿ ಸತ್ಯ ಹೊರಬರಲಿದೆ.
