ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ (VSKUB) ಹಣ ಪಡೆದು ಫೇಲಾದ ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುತ್ತಿದ್ದ ಕರಾಳ ದಂಧೆಯ ಮಹಾ ಸ್ಫೋಟವಾಗಿದೆ. ಪಬ್ಲಿಕ್ ಟಿವಿ (PUBLiC TV) ಕ್ಯಾಮೆರಾ ಮುಂದೆಯೇ ಮಧ್ಯವರ್ತಿಯೊಬ್ಬ ಆಡಿರುವ ಮಾತುಗಳು ಇಡೀ ವಿಶ್ವವಿದ್ಯಾಲಯದ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದ್ದು, ಸ್ವತಃ ಕುಲಪತಿ ಪ್ರೊ. ಮುನಿರಾಜು(Prof. M. Muniraju) ಅವರೇ ಶಾಕ್‌ಗೆ ಒಳಗಾಗಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಫೇಲಾದ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ, ಒಳಗಿರುವ ಸಿಬ್ಬಂದಿಗೆ ಸುಪಾರಿ ನೀಡಿ ಪಾಸ್ ಮಾಡಿಸುತ್ತಿದ್ದ ಜಾಲದ ರಹಸ್ಯವನ್ನು ಮಧ್ಯವರ್ತಿಯೊಬ್ಬ ಬಿಚ್ಚಿಟ್ಟಿದ್ದಾನೆ.
ಪಬ್ಲಿಕ್ ಟಿವಿ ವಾಹಿನಿಯ ಕ್ಯಾಮೆರಾ ಮುಂದೆಯೇ ಕುಲಪತಿ ಮುನಿರಾಜು ಅವರು ನೇರವಾಗಿ ದಂಧೆಯ ಮಧ್ಯವರ್ತಿಗೆ ಕರೆ ಮಾಡಿ, ಫೋನ್ ಲೌಡ್ ಸ್ಪೀಕರ್‌ನಲ್ಲಿ ಇಟ್ಟು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಮಧ್ಯವರ್ತಿಯು ಕುಲಪತಿಗಳ ಮುಂದೆಯೇ ವಿವಿಯ ಅಕ್ರಮವನ್ನು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಜ್ಯೂಸಲ್ಲಿ ಮತ್ತು ಬರುವ ಔಷಧಿ ಬೆರೆಸಿಕೊಟ್ಟು ಅತ್ಯಾಚಾರ – ಬೆತ್ತಲೆ ವಿಡಿಯೋ ಚಿತ್ರೀಕರಿಸಿ ವಿವಾಹಿತೆಗೆ ಬ್ಲ್ಯಾಕ್‌ಮೇಲ್
“ಸರ್, ಹಿಂದೆ ಫೇಲಾಗಿದ್ದ ಡಿಗ್ರಿ ಮತ್ತು ಪಿಜಿ (ಸ್ನಾತಕೋತ್ತರ) ವಿದ್ಯಾರ್ಥಿಗಳನ್ನು ನಾವು ರಿಯಾಜ್ ಮೂಲಕವೇ ಹಣ ಕೊಟ್ಟು ಪಾಸ್ ಮಾಡಿಸಿದ್ದೆವು. ಹಿಂದೆಲ್ಲಾ ಈ ರೀತಿ ಮಾಡಿಕೊಡುತ್ತಿದ್ದರು, ಆದರೆ ಈಗ ಆಗಲ್ಲ ಎನ್ನುತ್ತಿದ್ದಾರೆ” ಎಂದು ಕರಾಳ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಈ ಮಾತನ್ನು ಕೇಳಿ ಕುಲಪತಿಗಳು ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ. ಈ ಮೂಲಕ ವಿಎಸ್‌ಕೆ ವಿವಿಯಲ್ಲಿ ವರ್ಷಗಳಿಂದಲೂ ಈ ಅಕ್ರಮ ದಂಧೆ ನಡೆಯುತ್ತಿರುವುದು ಸಾಬೀತಾಗಿದೆ.
ಯುನಿವರ್ಸಿಟಿಯಲ್ಲಿ ಫೇಲಾದವರನ್ನು ಪಾಸ್ ಮಾಡುವ ದಂಧೆಯ ಕುರಿತು ಆಡಿಯೋ ಸಮೇತ ಸುದ್ದಿ ಬಿತ್ತರವಾದ ಬಳಿಕವೂ, ಈ ಜಾಲದ ಪ್ರಮುಖ ಸೂತ್ರಧಾರ ಎನ್ನಲಾದ ರಿಯಾಜ್ ಎಂಬ ಗುತ್ತಿಗೆ ನೌಕರ ಯಥಾ ಪ್ರಕಾರ ಕೆಲಸಕ್ಕೆ ಹಾಜರಾಗಿದ್ದ. UUCMS ವಿಭಾಗದ ಸಿಬ್ಬಂದಿ ಯಾರೂ ಕೆಲಸಕ್ಕೆ ಬರಬಾರದು, ಸೋಮವಾರ ಎಲ್ಲರೂ ವಿಚಾರಣೆಗೆ ಬರಬೇಕು ಎಂದು ಕುಲಪತಿಗಳು ಖಡಕ್ ಆದೇಶ ನೀಡಿದ್ದರೂ ಸಹ, ಈತ ತಲೆಕೆಡಿಸಿಕೊಳ್ಳದೆ ಕಚೇರಿಗೆ ಬಂದಿದ್ದ.
ಕುಲಪತಿಯಿಂದ ಕ್ಲಾಸ್:
ಹಣ ಪಡೆದು ಪಾಸ್ ಮಾಡಿಸುತ್ತಿದ್ದ ದಂಧೆಯ ಕಿಂಗ್‌ಪಿನ್ ರಿಯಾಜ್ ಮತ್ತೆ ಕೆಲಸಕ್ಕೆ ಬಂದಿರುವ ವಿಚಾರವನ್ನು ಪಬ್ಲಿಕ್ ಟಿವಿ ನೇರವಾಗಿ ಕುಲಪತಿ ಮುನಿರಾಜು ಅವರ ಗಮನಕ್ಕೆ ತಂದಿತು. ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಕುಲಪತಿಗಳು, ರಿಯಾಜ್‌ನನ್ನು ತಕ್ಷಣವೇ ಕ್ಯಾಮೆರಾ ಮುಂದೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಮಹಾವಂಚನೆ ಕುರಿತು ಪ್ರತಿಕ್ರಿಯಿಸಿದ ಕುಲಪತಿ ಮುನಿರಾಜು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸಮಗ್ರ ವರದಿಯನ್ನು ಪಡೆದುಕೊಂಡು, ಬರುವ ಸೋಮವಾರದಂದು ತಪ್ಪಿತಸ್ಥರ ವಿರುದ್ಧ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
