ಧಾರವಾಡ: ಅಗ್ನಿಪಥ್ ಯೋಜನೆ ವಿರುದ್ಧ ಕಾಂಗ್ರೆಸ್ ಬೇಕೆಂದು ಯುವಕರನ್ನು ಪ್ರಚೋದಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆಕ್ರೋಶ ಹೊರಹಾಕಿದರು.
ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಮಹತ್ತರವಾದ ಯೋಜನೆಯಾಗಿದೆ. ಇಲ್ಲಿ ನಾಲ್ಕು ವರ್ಷದ ಸರ್ವಿಸ್ ಬಳಿಕ ಬೇಕಾದ ನೌಕರಿ ಸೇರಬಹುದು. ಅದರಲ್ಲಿ ಮೀಸಲಾತಿ ಸಹ ಕೂಡುತ್ತಿದ್ದಾರೆ ಎಂದು ವಿವರಿಸಿದರು.
ಪ್ರತಿಭಟನೆ ಮಾಡುವವರೆಲ್ಲ ಆರ್ಮಿ ಸೇರಬಯಸುವವರು ಅಲ್ವಾ? ಆರ್ಮಿಗೆ ಹೋಗುವ ಉದ್ದೇಶ ದೇಶ ರಕ್ಷಣೆ. ದೇಶ ಪ್ರೇಮ ತೋರಿಸುವವರು ರೈಲ್ವೆಗೆ ಬೆಂಕಿ ಹಾಕ್ತಾರಾ? ಜನರಿಗೆ ತೊಂದರೆ ಕೊಟ್ಟು ದೇಶ ಕಾಯೋಕೆ ಆಗುತ್ತಾ? ಇದೆಲ್ಲವೂ ಕಿಡಿಗೇಡಿಗಳ ಕುತಂತ್ರವಾಗಿದೆ. ಉದ್ದೇಶಪೂರ್ವಕವಾಗಿ ಇದನ್ನುಪ್ರಚೋದಿಸುತ್ತಿದ್ದಾರೆ. ಇದಕ್ಕೆ ಯುವಕರು ಬಲಿಯಾಗಬಾರದು. ಕಾಂಗ್ರೆಸ್ ಪಕ್ಷ ಎಲ್ಲ ಕಡೆ ಅದೇ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ: ಬಿ.ಶ್ರೀರಾಮುಲು
ರಾಹುಲ್ ಗಾಂಧಿಗೆ ವಿಚಾರಣೆಗೆ ಕರೆದರೆ ಪ್ರತಿಭಟನೆ ಮಾಡಿದ್ರು. ಹಿಂದೆ ಖರ್ಗೆಯವರನ್ನೂ ಇಡಿ ವಿಚಾರಣೆಗೆ ಕರೆದಿತ್ತು. ಆಗ ಒಬ್ಬರೂ ಪ್ರತಿಭಟನೆಗೆ ಬರಲಿಲ್ಲ. ಓರ್ವ ಹಿರಿಯ ದಲಿತ ನಾಯಕ ಖರ್ಗೆ. ಅದೇ ರೀತಿ ರಾಹುಲ್, ಸೋನಿಯಾ ಅವರನ್ನು ಕರೆದು ವಿಚಾರಣೆ ಮಾಡಬಾರದು ಅಂದ್ರೆ ಹೇಗೆ? ಈ ದೇಶದಲ್ಲಿ ನ್ಯಾಯ, ಸಂವಿಧಾನಕ್ಕೆ ಎಲ್ಲರೂ ತಲೆಬಾಗಬೇಕು. ಕರೆಯಬಾರದು ಅಂತಾ ಧಮ್ಕಿ ಹಾಕಿದ್ರೆ ಹೇಗೆ ಎಂದು ಪ್ರಶ್ನಿಸಿದರು.
ನಾಳೆ ಯಾರೋ ಒಬ್ಬ ಕೊಲೆ ಮಾಡ್ತಾನೆ. ಅವನನ್ನು ಬಂಧಿಸಬೇಡಿ ಅಂತಾ ಪ್ರತಿಭಟಿಸ್ತಾರಾ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ದೂರು ದಾಖಲಾಗಿದೆ. ಇಡಿ ಪ್ರಧಾನಿ ಮಾತು ಕೇಳುತ್ತೆ ಅಂತಾರೆ. ಹಾಗಾದ್ರೆ ಹಿಂದೆ ಪಿಎಂ ಆಗಿದ್ದ ಮನಮೋಹನ್ ಸಿಂಗ್ ಕೇಸ್ ಆಗದಂತೆ ಮಾಡುತ್ತಿದ್ದರಲ್ವಾ? ಇಡಿ ಸ್ವತಂತ್ರವಾದ ಸಂಸ್ಥೆ. ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡಬೇಕು ಎಂದು ಕಿಡಿಕಾರಿದರು.