ಹಾಸನ: ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ ಹೊರತಾಗಿಯೂ ಹಾಸನ ಜಿಲ್ಲೆ (hassan) ಮಳೆಯ ಕೊರತೆ ಎದುರಿಸುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯದ ಒಡಲು ಬತ್ತುತ್ತಿದ್ದು, ಸದ್ಯ 10.185 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗುವ ಆತಂಕ ಶುರುವಾಗಿದೆ.
ಕಾವೇರಿ ನೀರಾವರಿ ನಿಗಮಕ್ಕೆ ಒಳಪಡುವ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ 37.105 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಸದ್ಯ ಜಲಾಶಯದಲ್ಲಿ 14.552 ಟಿಎಂಸಿ ನೀರಿದೆ. ಇದರಲ್ಲಿ 10.185 ಟಿಎಂಸಿ ನೀರು ಬಳಕೆಗೆ ಮಾತ್ರ ಲಭ್ಯ. ಇನ್ನುಳಿದ 4.372 ಟಿಎಂಸಿ ನೀರು ಡೆಡ್ ಸ್ಟೋರೇಜ್. ಕಳೆದ ವರ್ಷ ಮುಂಗಾರಿನ ಅವಧಿಯಲ್ಲಿ ಜಲಾಶಯದಲ್ಲಿ ಒಟ್ಟು 24.482 ಟಿಎಂಸಿ ನೀರು ಸಂಗ್ರಹವಾಗಿತ್ತು. ಇದರಲ್ಲಿ 20.110 ಟಿಎಂಸಿ ನೀರು ಬಳಕೆಗೆ ಲಭ್ಯವಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜಲಾಶಯದಲ್ಲಿ ಅರ್ಧದಷ್ಟು ನೀರು ಕಡಿಮೆಯಿದೆ. ಇದನ್ನೂ ಓದಿ: ಹಾಸನದಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ – ದುಷ್ಕರ್ಮಿಗಳು ಎಸ್ಕೇಪ್
ಕಾವೇರಿಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ ಮೂಡಿಗೆರೆ, ಸಕಲೇಶಪುರ, ಆಲೂರು ಭಾಗದಲ್ಲಿ ಉತ್ತಮ ಮಳೆಯಾದರೆ ಮಾತ್ರ ಭರ್ತಿಯಾಗಲಿದೆ. ಮುಂಗಾರು ಪ್ರವೇಶಿಸಿ ಹಲವು ದಿನಗಳಾದರೂ ಮಳೆ ಬಾರದ ಕಾರಣ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಕುಂಠಿತ ಆಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ.
ಹೇಮಾವತಿ ಜಲಾಶಯ ಹಾಸನ ಮಾತ್ರವಲ್ಲದೆ, ಮಂಡ್ಯ, ತುಮಕೂರು ಹಾಗೂ ಮೈಸೂರು ಜಿಲ್ಲೆಗಳಿಗೂ ನೀರೊದಗಿಸುತ್ತದೆ. ಹೀಗಾಗಿ ಜಲಾಶಯ ಭರ್ತಿಯಾಗದಿದ್ದರೆ ಅಕ್ಕಪಕ್ಕದ ಜಿಲ್ಲೆಗಳ ರೈತರೂ ಕೂಡ ಸಂಕಷ್ಟಕ್ಕೀಡಾಗಲಿದ್ದಾರೆ. ಇಂತಹ ಭೀಕರ ಬರಗಾಲದ ಪರಿಸ್ಥಿತಿಯಲ್ಲೂ ನಾಲೆಗಳಿಗೆ 300 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಇಂದಿನಿಂದ ಖಾಸಗಿ ಬಸ್ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಬಿಸಿ
