ಹೈದರಾಬಾದ್: ತೆಲಂಗಾಣದ ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ಮುಖ್ಯ ಇಂಜಿನಿಯರ್‌ನನ್ನು (Engineer-in-Chief) ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳು ಬಂಧಿಸಿದ್ದಾರೆ.
ಮೋಹನ್ ನಾಯ್ಕ್ ಜಾರುಪ್ಲ (Mohan Naik Jarupla) ಬಂಧಿತ ಆರೋಪಿ. ಈತ ತನ್ನ ಸರ್ಕಾರಿ ಸೇವೆಯ ಅವಧಿಯಲ್ಲಿ ಕಾನೂನು ಬಾಹಿರವಾಗಿ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಗಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಮೋಹನ್ ನಾಯ್ಕ್ ಅವರ ಕಚೇರಿ, ನಿವಾಸ ಹಾಗೂ ಅವರ ಸಂಬಂಧಿಕರು, ಆಪ್ತರಿಗೆ ಸೇರಿದ ಒಟ್ಟು 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಇದನ್ನೂ ಓದಿ: ಜೂಮ್ ಆ್ಯಪ್‌ನಲ್ಲಿ ಬುಕ್ ಮಾಡಿ ಕಾರು ಕಳ್ಳತನ; ಅಂತಾರಾಜ್ಯ ನಕಲಿ ಬಾಡಿಗೆದಾರ ಅರೆಸ್ಟ್
ದಾಳಿಯ ಸಂದರ್ಭದಲ್ಲಿ ತನಿಖಾಧಿಕಾರಿಗಳು ಅಪಾರ ಪ್ರಮಾಣದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಎಸಿಬಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ನಿಜಾಮಾಬಾದ್ ಜಿಲ್ಲೆಯ ದಿಚ್‌ಪಲ್ಲಿ ಮಂಡಲದ ಮುಲ್ಲಂಗಿ ಗ್ರಾಮದಲ್ಲಿ 19.38 ಎಕರೆ ವಿಸ್ತೀರ್ಣದ 5 ಕೃಷಿ ಭೂಮಿಯ ದಾಖಲೆಗಳು ಸಿಕ್ಕಿದ್ದು, ಇದರ ಸರ್ಕಾರಿ ಮೌಲ್ಯ ಸುಮಾರು 82.9 ಲಕ್ಷ ರೂ.ಗಳಾಗಿದೆ. ಇದರೊಂದಿಗೆ ಕೊಂಪಲ್ಲಿಯಲ್ಲಿ ಮೂರು ಮತ್ತು ಗಚಿಬೌಲಿಯಲ್ಲಿ ನಾಲ್ಕು ಸೇರಿದಂತೆ ಒಟ್ಟು 7 ಫ್ಲಾಟ್‌ಗಳು ಪತ್ತೆಯಾಗಿದ್ದು, ಇವುಗಳ ಒಟ್ಟು ಸರ್ಕಾರಿ ಮೌಲ್ಯ ಅಂದಾಜು 7.35 ಕೋಟಿ ರೂ.ಗಳಾಗಿದೆ. ಇದನ್ನೂ ಓದಿ: ಡಿಕೆ ಸರ್ಕಾರದಲ್ಲಿ ಸಂಪುಟ ಕಸರತ್ತು – ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ ಸಿಎಂ
ಹೈದರಾಬಾದ್‌ನ ಹಲವು ಪ್ರಮುಖ ಪ್ರದೇಶಗಳಲ್ಲಿ ಆಸ್ತಿ ಪತ್ತೆಯಾಗಿದ್ದು, ಮಿಯಾಪುರದಲ್ಲಿ ಸುಮಾರು 2.5 ಕೋಟಿ ರೂ. ಮೌಲ್ಯದ ಒಂದು ಟ್ರಿಪ್ಲೆಕ್ಸ್ ವಿಲ್ಲಾ, ಕೂಕಟ್‌ಪಲ್ಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸುಮಾರು 62.14 ಲಕ್ಷ ರೂ. ಮೌಲ್ಯದ ಮನೆ ಹಾಗೂ ನಿಜಾಂಪೇಟೆಯಲ್ಲಿ ಮತ್ತೊಂದು ಹೊಸ ವಿಲ್ಲಾ ಖರೀದಿಸಲು 1 ಕೋಟಿ ರೂ. ಅಡ್ವಾನ್ಸ್ ನೀಡಿರುವ ದಾಖಲೆಗಳು ಲಭ್ಯವಾಗಿವೆ. ಈ ಎಲ್ಲಾ ಸ್ಥಿರ ಆಸ್ತಿಗಳ ಮಾರುಕಟ್ಟೆ ಮೌಲ್ಯವು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿರುವುದಕ್ಕಿಂತ ತೀರಾ ಹೆಚ್ಚಳವಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನ್ ಮೇಲೆ ಪಾಕ್ ಬಾಂಬ್ ದಾಳಿ – 11 ಮಕ್ಕಳು ಸೇರಿ 13 ಮಂದಿ ಸಾವು
ಇಷ್ಟೇ ಅಲ್ಲದೆ, ದಾಳಿ ನಡೆಸಿದ ವೇಳೆ 55 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಲಾಗಿದ್ದ ಸುಮಾರು 1.44 ಕೋಟಿ ರೂ. ಡೆಪಾಸಿಟ್ ದಾಖಲೆಗಳು, ಅಂದಾಜು 2 ಕೋಟಿ ರೂ. ಮೌಲ್ಯದ 2.5 ಕೆಜಿ ಚಿನ್ನದ ಆಭರಣಗಳು ಹಾಗೂ 3.6 ಲಕ್ಷ ರೂ. ಮೌಲ್ಯದ 6 ಕೆಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 1.26 ಕೋಟಿ ರೂ. ಮೌಲ್ಯದ ಮನೆ ಬಳಕೆ ವಸ್ತುಗಳು, 9 ಮೊಬೈಲ್ ಫೋನ್‌ಗಳು ಮತ್ತು 4 ಲ್ಯಾಪ್‌ಟಾಪ್‌ಗಳು ಸೇರಿದಂತೆ 11.25 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ 25 ಲಕ್ಷ ರೂ. ಮೌಲ್ಯದ ಎರಡು ಐಷಾರಾಮಿ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಮಳೆ ಕೊರತೆ – ಬರಿದಾಗುತ್ತಿದೆ ಜೀವನದಿ ಹೇಮಾವತಿ ಜಲಾಶಯದ ಒಡಲು
ಇದುವರೆಗಿನ ಪ್ರಾಥಮಿಕ ತನಿಖೆಯಲ್ಲಿ ದಾಳಿಯಿಂದ ಪತ್ತೆಯಾಗಿರುವ ಒಟ್ಟು ಆಸ್ತಿಯ ಅಧಿಕೃತ ಮೌಲ್ಯವನ್ನು 17.95 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಹೈದರಾಬಾದ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸದ್ಯದ ರಿಯಲ್ ಎಸ್ಟೇಟ್ ದರಗಳನ್ನು ಪರಿಗಣಿಸಿದರೆ ಈ ಆಸ್ತಿಗಳ ನಿಜವಾದ ಮಾರುಕಟ್ಟೆ ಮೌಲ್ಯವು ಬರೋಬ್ಬರಿ 100 ಕೋಟಿ ರೂ.ಗಳಿಗಿಂತಲೂ ಹೆಚ್ಚಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆರೋಪಿತ ಅಧಿಕಾರಿಗೆ ಸೇರಿದ ಇನ್ನೂ ಕೆಲವು ಹೆಚ್ಚುವರಿ ಆಸ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಬಂಧಿತ ಅಧಿಕಾರಿಯನ್ನು ಹೈದರಾಬಾದ್‌ನ ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ವಿಧಿವಶ
