ಬೆಂಗಳೂರು: ಬಾಡಿಗೆ ಆಧಾರಿತ ಸೇವೆ ಒದಗಿಸುವ ಜೂಮ್ ಆ್ಯಪ್‌ನಲ್ಲಿ (Zoom App) ಬುಕ್ ಮಾಡಿ ಕಾರನ್ನ ಕಳ್ಳತನ ಮಾಡಿದ್ದ ಅಂತಾರಾಜ್ಯ ಖದೀಮನನ್ನ ಮಲ್ಲೇಶ್ವರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಾದರಾಯನಪುರ ನಿವಾಸಿ ಸೈಯದ್ ಕದೀರ್ ಪಾಷಾ ಎಂಬವರ ಸ್ವಿಫ್ಟ್ ಕಾರನ್ನ ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಕೇರಳದ ಕಣ್ಣೂರು ಮೂಲದ ಮಿಶೆಲ್ ಶಫೀಕ್ ಎಂಬಾತನನ್ನ ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ ತಾಲೂಕಿನಲ್ಲಿ ಚಿರತೆ ಹಾವಳಿ; ಜನರಲ್ಲಿ ಆತಂಕ
ಪಾದರಾಯನಪುರದ ಬಾಡಿಗೆ ಮನೆಯಲ್ಲಿ ವಾಸವಿರುವ ಸೈಯ್ಯದ್, ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿದ್ದಾರೆ. 2023ರಲ್ಲಿ ಸ್ವಿಫ್ಟ್ ಕಾರು ಖರೀದಿಸಿದ್ದು, ಮನೆ ಮುಂದೆ ಪಾರ್ಕಿಂಗ್‌ಗೆ ಜಾಗವಿಲ್ಲದ ಕಾರಣ ಸಂಬಂಧಿಕರೊಬ್ಬರು ಮಲ್ಲೇಶ್ವರದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ, 15ನೇ ಕ್ರಾಸ್‌ನಲ್ಲಿರುವ ಎಂಇಎಸ್ ಕಾಲೇಜು ಮುಂದೆ ಇರುವ ರಸ್ತೆ ಬದಿಯಲ್ಲಿ ಕಾರು ಪಾರ್ಕಿಂಗ್ ಮಾಡಿದ್ದರು. ದೂರುದಾರ ಸೈಯ್ಯದ್ ಅವರು ಕಾರನ್ನ ಸಹೋದರ ಫೈಸಲ್ ಖಾನ್ ಹೆಸರಿನಲ್ಲಿ ಜೂಮ್ ಕಾರ್ ಆ್ಯಪ್‌ನಲ್ಲಿ ನೋಂದಣಿ ಮಾಡಿಸಲಾಗಿತ್ತು. ಏ.22ರಂದು ಬೆಳಗ್ಗೆ ಆರೋಪಿ ಮಿಶೆಲ್ ಸಫೀಕ್ ಕಾರು ಬುಕ್ ಮಾಡಿದ್ದ. ಇದರಂತೆ ಆತನನ್ನ ಭೇಟಿಯಾಗಿ ಕಂಪನಿ ಷರತ್ತುಗಳನ್ನ ಹೇಳಿ ಆತನಿಂದ ಡಿಎಲ್ ಹಾಗೂ ಆಧಾರ್ ಕಾರ್ಡ್ ಪಡೆದು ಕಾರ್ ನೀಡಿದ್ದೆ. ಒಂದು ದಿನಕ್ಕೆಂದು ಕಾರು ಬುಕ್ ಮಾಡಿದ್ದ ಆರೋಪಿಯು ಅಂದಿನಿಂದ ಈವರೆಗೂ ಕಾರು ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಸೈಯ್ಯದ್ ತಿಳಿಸಿದ್ಧಾರೆ.
ಕಾರು ವಾಪಸ್ ನೀಡದ ಸಂಬಂಧ ಕಂಪನಿಗೆ ಹೋಗಿ ವಿಚಾರಣೆ ನಡೆಸಿದಾಗ ಕಾರು ಪತ್ತೆ ಹಚ್ಚುವಂತೆ ಕಾರ್ ರಿಕವರಿ ವಿಭಾಗಕ್ಕೆ ಸೂಚಿಸಲಾಗಿತ್ತು. ಪರಿಶೀಲನೆ ವೇಳೆ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಡಿವೈಸ್ ಕಟ್ ಮಾಡಿರುವುದು ಗೊತ್ತಾಗಿದೆ. ಆಧಾರ್ ಕಾರ್ಡ್‌ನಲ್ಲಿದ್ದ ಕೇರಳ ವಿಳಾಸಕ್ಕೆ ಹೋದಾಗ ಮೂರು ವರ್ಷಗಳಿಂದ ಅರೋಪಿ ತಲೆಮರೆಸಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಳ್ಳತನ ಮಾಡುವ ಉದ್ದೇಶದಿಂದ ಬಾಡಿಗೆ ನೆಪದಲ್ಲಿ ಕಾರು ಪಡೆದು ಮೋಸ ಮಾಡಿರುವುದಾಗಿ ದೂರಿನಲ್ಲಿ ಸೈಯ್ಯದ್ ಆರೋಪಿಸಿದ್ದಾರೆ.
ಬಾಡಿಗೆ ನೆಪದಲ್ಲಿ ಕಾರು ಪಡೆದು ಕೇರಳಕ್ಕೆ ತೆರಳಿದ್ದ. ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಡಿವೈಸ್ ಹಾಗೂ ಕಾರಿಗೆ ಅಂಟಿಸಿದ್ದ ಫಾಸ್ಟ್ ಟ್ಯಾಗ್ ಕಿತ್ತು ಹಾಕಿದ್ದ. ಕಂಪನಿಯು ಸಂಪರ್ಕಿಸಿದಾಗ ಕೆಲಸ ನಿಮಿತ್ತ ಕೇರಳಕ್ಕೆ ಬಂದಿದ್ದು, ಶೀಘ್ರದಲ್ಲಿ ಕಾರು ವಾಪಸ್ ನೀಡುವೆ ಎಂದು ಸಬೂಬು ನೀಡುತ್ತಿದ್ದ. ಕಾರನ್ನ ಬೇರೆಯವರಿಗೆ ನೀಡಿ ಬೆಂಗಳೂರಿಗೆ ಬಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈತನಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರಿಗೆ ತಾಂತ್ರಿಕ ಸುಳಿವು ಅಧರಿಸಿ ಎಲೆಕ್ಟ್ರಾನಿಕ್ ಸಿಟಿ ಬಳಿ ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
ಕಣ್ಣೂರು, ತ್ರಿಶೂರ್ ಸೇರಿದಂತೆ ಕೇರಳದಲ್ಲಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿಬಂದಿದ್ದ ಎನ್ನಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿರುವ ಪೊಲೀಸರು, ಬಾಡಿಗೆ ಪಡೆದ ಕಾರನ್ನ ಸ್ನೇಹಿತರಿಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತನ ಮಾಹಿತಿ ಆಧರಿಸಿ ಕಾರು ರಿಕವರಿಗಾಗಿ ಕೇರಳಕ್ಕೆ ವಿಶೇಷ ತಂಡ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
