Monday, 17th June 2019

ರೋಹಿತ್ ಶತಕ, ಭುವನೇಶ್ವರ್ ಅಮೋಘ ಆಟ ವ್ಯರ್ಥ

– ಮೊದಲ ಏಕದಿನ ಪಂದ್ಯದಲ್ಲಿಯೇ ಮುಗ್ಗರಿಸಿದ ಟೀಂ ಇಂಡಿಯಾ

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಮೋಘ ಶತಕ ವ್ಯರ್ಥವಾಯಿತು.

ಆಸೀಸ್ ತಂಡದ ವೇಗಿ ಜೇಸನ್ ಬೆಹ್ರೆನ್‍ಡಾರ್ಫ್ ಮೊದಲ ಓವರ್‌ನಲ್ಲೇ ಆರಂಭಿಕ ಎಡಗೈ ಬ್ಯಾಟ್ಸಮನ್ ಶಿಖರ್ ಧವನ್ ಅವರನ್ನು ಶೂನ್ಯಕ್ಕೆ ಹೊರಗಟ್ಟಿದರು. ಈ ಮೂಲಕ ಚೊಚ್ಚಲ ಅಂತರಾಷ್ಟ್ರೀಯ ವಿಕೆಟ್ ಸಾಧನೆಯನ್ನು ಬೆಹ್ರೆನ್‍ಡಾರ್ಫ್ ಮಾಡಿದರು. ಆರಂಭದಲ್ಲಿ ಟೀಂ ಇಂಡಿಯಾ ಬ್ಯಾಟ್ಸಮನ್‍ಗಳು ಎಡವಿದರು. ನಾಯಕ ವಿರಾಟ್ ಕೊಹ್ಲಿ (3), ಅಂಬಟಿ ರಾಯುಡು (0) ವಿಕೆಟ್ ಒಪ್ಪಿಸಿದ್ದರಿಂದ ಟೀಂ ಇಂಡಿಯಾ ಆಘಾತಕ್ಕೆ ಒಳಗಾಯಿತು.

ಇದರೊಂದಿಗೆ 3.5 ಓವರ್‌ಗಳಲ್ಲೇ 4 ರನ್ ಗಳಿಸುವುದರೆಡೆಗೆ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ಓವರ್ ಪೂರ್ಣಗೊಂಡಾಗ ಭಾರತ 3 ವಿಕೆಟ್ ಕಳೆದುಕೊಂಡು ಕೇವಲ 4 ರನ್ ಗಳಿಸಿತ್ತು. 18 ಎಸೆತಗಳನ್ನು ಎದುರಿಸಿದ್ದರೂ ಒಂದೇ ಒಂದು ರನ್ ಬಾರಿಸದ ರೋಹಿತ್ ಶರ್ಮಾ ನೋ ಬಾಲ್ ಫ್ರಿ ಹಿಟ್‍ನಲ್ಲಿ ಸಿಕ್ಸರ್ ಸಿಡಿ ರನ್ ಖಾತೆ ತೆರೆದರು. ಆರನೇ ಓವರ್‌ನ ಕೊನೆಯ ಎಸೆತಕ್ಕೆ ಸಿಂಗಲ್ ರನ್ ಗಳಿಸಿದ ಮಹೇಂದ್ರ ಸಿಂಗ್ ಧೋನಿ ಏಕದಿನದ ಪಂದ್ಯದಲ್ಲಿ 10,000 ರನ್‍ಗಳ ದಾಖಲೆ ಬರೆದರು.

10 ಓವರ್ ಮುಕ್ತಾಯದ ವೇಳೆಗೆ ಭಾರತ ಮೂರು ವಿಕೆಟ್ ನಷ್ಟಕ್ಕೆ ಕೇವಲ 21 ಗಳಿಸಿದ್ದ ಭಾರತ ನಿಧಾನವಾಗಿ ರನ್ ಗಳಿಕೆಯನ್ನು ಆರಂಭಿಸಿತ್ತು. ಧೋನಿ ಹಾಗೂ ರೋಹಿತ್ ಎಚ್ಚರಿಕೆ ಆಟವಾಡಿ, ವಿಕೆಟ್ ಕಾಯ್ದುಕೊಂಡು 20 ಓವರ್‌ಗಳಲ್ಲಿ 68 ರನ್ ಗಳಿಸಲು ಯಶಸ್ವಿಯಾದರು. ಬಳಿಕ ಧೋನಿ ನಿಧಾನವಾಗಿ ಸಾಥ್ ನೀಡಿದರೆ, ಹಿಟ್‍ಮ್ಯಾನ್ ರೋಹಿತ್ ಶರ್ಮಾ ರನ್ ಕಲೆಹಾಕಲು ಮುಂದಾದರು. ಇದರಿಂದಾಗಿ 63ನೇ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ರೋಹಿತ್‍ಗೆ ಸಾಥ್ ನೀಡುತ್ತಲೇ ಮಹೇಂದ್ರ ಸಿಂಗ್ ದೋನಿ ಕೂಡ 96 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಧೋನಿ (51 ರನ್- 3ಬೌಂಡರಿ, ಒಂದು ಸಿಕ್ಸರ್‌ಗೆ) ವಿಕೆಟ್ ಒಪ್ಪಿಸಿದರು.

ಅಲ್ಲದೆ ರೋಹಿತ್ ಜತೆ ನಾಲ್ಕನೇ ವಿಕೆಟ್‍ಗೆ 137 ರನ್‍ಗಳ ಜತೆಯಾಟದಲ್ಲಿ ಭಾಗಿಯಾದರು. ಧೋನಿ ವಿಕೆಟ್ ಸಹ ಡೆಬ್ಯು ವೇಗಿ ಬೆಹ್ರೆನ್‍ಡಾರ್ಫ್ ಪಾಲಾಯಿತು. ಬಳಿಕ ಮೈದಾನಕ್ಕೆ ಬಂದ ದಿನೇಶ್ ಕಾರ್ತಿಕ್ 12 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು. ಈ ವೇಳೆಗೆ ರೋಹಿತ್ ಶರ್ಮಾ 110 ಎಸೆತಗಳಲ್ಲಿ ಶತಕ ಪೂರೈಸಿ, ಏಕದಿನದಲ್ಲಿ 22ನೇ ಶತಕ ಸಾಧನೆ ಮಾಡಿದರು. ಶತಕದ ಬಳಿಕ ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ 129 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಗಳನ್ನು ಸಿಡಿಸಿ ವಿಕೆಟ್ ಒಪ್ಪಿಸಿದರು.

ರವೀಂದ್ರ ಜಡೇಜಾ (8) ರನ್‍ಗೆ ವಿಕೆಟ್ ಒಪ್ಪಿಸಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಇತ್ತ ಬೌಲರ್ ಭುವನೇಶ್ವರ್ ಕುಮಾರ್ ಅಜೇಯ (29), ಕುಲದೀಪ್ ಯಾದವ್ (3) ಹಾಗೂ ಮೊಹಮ್ಮದ್ ಶಮಿ (1) ರನ್ ಗಳಿಸಿದರು ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. 50 ಓವರ್ ಆಡಿದ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 254 ಗಳಿಸಿ ಸೋಲು ಕಂಡಿತು.

ಆಸ್ಟ್ರೇಲಿಯಾ ಬ್ಯಾಟಿಂಗ್:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, 50 ಓವರ್‍ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 288 ರನ್‍ಗಳನ್ನು ಕಲೆಹಾಕಿತ್ತು. ಮೂರನೇ ಓವರ್ ಬಾಲಿಂಗ್ ಮಾಡಿದ ಭುನೇಶ್ವರ್ ಆ್ಯರೋನ್ ಫಿಂಚ್ (6) ವಿಕೆಟ್ ಕಬಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‍ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು.

10ನೇ ಓವರ್ ಬಾಲಿಂಗ್ ಮಾಡಿದ ಕುಲದೀಪ್ ಯಾದವ್ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‍ಮನ್ ಅಲೆಕ್ಸ್ ಕ್ಯಾರಿ (24) ವಿಕೆಟ್ ಕಬಳಿಸಿದರು. ಇದರೊಂದಿಗೆ 10 ಓವರ್‌ಗೆ ಆಸ್ಟ್ರೇಲಿಯಾವನ್ನು ಟೀಂ ಇಂಡಿಯಾ ಬೌಲರ್‌ಗಳು 41 ರನ್‍ಗೆ ಕಟ್ಟಿಹಾಕಿದ್ದರು. ಈ ವೇಳೆ ತಂಡಕ್ಕೆ ಆಸರೆಯಾಗಿ ನಿಂತ ಉಸ್ಮಾನ್ ಖವಾಜ ಹಾಗೂ ಶಾನ್ ಮಾರ್ಶ್ ಜೊತೆಯಾಟದಿಂದ ನಿಧಾನವಾಗಿ ರನ್ ಏರಿಕೆ ಕಂಡಿತು. ಆದರೆ ಉಸ್ಮಾನ್ ಖವಾಜ 59 ರನ್‍ಗೆ (81 ಎಸೆತ) ಪೆವೆಲಿನ್‍ಗೆ ಮರಳಿದರು. ಉಸ್ಮಾನ್ ಖವಾಜ ಹಾಗೂ ಮಾರ್ಶ್ ಅವರು 92 ರನ್ ಜತೆಯಾಟವು ತಂಡಕ್ಕೆ ಆಸರೆ ಆಗಿತ್ತು.

ಮಾರ್ಶ್ ಜತೆ ಸೇರಿದ ಹ್ಯಾಂಡ್ಸ್‍ಕಾಂಬ್ ಬಿರುಸಿನ ಆಟ ಆರಂಭಿಸಿದರು. ಇದ್ಕಕೆ ಸಾಥ್ ನೀಡಿದ ಮಾರ್ಶ್ ರನ್‍ಗಳನ್ನು ಕಲೆಹಾಕುವಲ್ಲಿ ಮುಂದಾದರು. 70 ಎಸೆತಗಳಲ್ಲಿ ನಾಲ್ಕು ಬೌಂಡರಿಗಳಿಂದ 54 ರನ್ ಗಳಿಸಿದ ಮಾರ್ಶ್ ಕುಲದೀಪ್ ಯಾದವ್ ದಾಳಿಗೆ ವಿಕೆಟ್ ಕಳೆದುಕೊಂಡರು. ತಂಡದ ಮೊತ್ತವನ್ನು ವೇಗವಾಗಿ ಏರಿಸಿದ್ದ ಹ್ಯಾಂಡ್ಸ್ ಕಾಂಬ್ 61 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳಿಂದ 73 ಗಳಿಸಿ ಭುವನೇಶ್ವರ್ ಬೌಲಿಂಗ್ ವೇಳೆ ಶಿಖರ್ ಧವನ್‍ಗೆ ಕ್ಯಾಚ್ ಒಪ್ಪಿಸಿ ಪೆವಿಲಿಯನ್‍ಗೆ ನಡೆದರು. ಸ್ಟೋಯ್ನಿಸ್ 43 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 47 ರನ್ ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ 11 ರನ್‍ಗಳನ್ನು ಅಜೇಯರಾಗುಳಿದರು. ಈ ಮೂಲಕ ಐದು ವಿಕೆಟ್ ನಷ್ಟಕ್ಕೆ 288 ರನ್‍ಗಳ ಗಳಿಸಿ ಟೀ ಇಂಡಿಯಾಗೆ ಸವಾಲು ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *