ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ದುರುಪಯೋಗಕ್ಕೆ ತಡೆ ಹಾಕಲು ಮುಂದಾಗಿರುವ ಸರ್ಕಾರ, ಹೊಸದಾಗಿ ಅರ್ಜಿ ಸಲ್ಲಿಸಲು ಮತ್ತು ಹಳೆಯ ಫಲಾನುಭವಿಗಳ ಪರಿಶೀಲನೆಗೆ ಬಿರುಸಿನ ಸಿದ್ಧತೆ ನಡೆಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇನ್ನು 2-3 ದಿನಗಳಲ್ಲಿ ಅಧಿಕೃತ ಮಾರ್ಗಸೂಚಿಯನ್ನು ಅಂತಿಮಗೊಳಿಸಲಿದ್ದು, ಆ ಬಳಿಕ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಯೋಜನೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಫಲ ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿರುವುದು ಹಾಗೂ ಐಟಿ (ಆದಾಯ ತೆರಿಗೆ) ಮತ್ತು ಜಿಎಸ್‌ಟಿ ಪಾವತಿದಾರರಿಗೂ ಹಣ ಸಂದಾಯವಾಗುತ್ತಿರುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆಯನ್ನು ಸರಿಪಡಿಸಲು ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿವೆ.
ಮನೆ ಬಾಗಿಲಿಗೇ ಸಹಾಯಕಿಯರು!
ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆ ಎದುರಿಸುವ ಅಥವಾ ಅನಕ್ಷರಸ್ಥ ಮತ್ತು ಬಡ ಗೃಹಲಕ್ಷ್ಮಿಯರ ನೆರವಿಗಾಗಿ ಸರ್ಕಾರ ಈ ಬಾರಿ ವಿಶೇಷ ವ್ಯವಸ್ಥೆ ಮಾಡಿದೆ. ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಹಾಯಕರಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅವರ ಮೊಬೈಲ್ ಫೋನ್‌ಗಳಿಗೆ ವಿಶೇಷ ಆಪ್ ಇನ್‌ಸ್ಟಾಲ್ ಮಾಡಲಾಗುತ್ತಿದ್ದು, ಈ ಆಪ್ ಮೂಲಕ ಅವರು ಅರ್ಹ ಮಹಿಳೆಯರ ಮನೆಗೆ ತೆರಳಿ ಅರ್ಜಿ ಸಲ್ಲಿಸಲು ಸಹಕರಿಸಲಿದ್ದಾರೆ.
ಎಂದಿನಂತೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಅಧಿಕೃತ ಬ್ರೌಸಿಂಗ್ ಸೆಂಟರ್‌ಗಳಲ್ಲೂ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿರಲಿದೆ. ಈ ಬಾರಿಯ ಮರು ಅರ್ಜಿಯಲ್ಲಿ ದುರುಪಯೋಗ ತಡೆಯಲು ಬಯೋಮೆಟ್ರಿಕ್ ಅಥವಾ ಫೇಸ್ ರಿಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನವನ್ನು ಅಳವಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರ ಫೋನ್‌ನಲ್ಲಿ ಥಂಬ್ ಮೆಷಿನ್ (Thumb Machine) ವ್ಯವಸ್ಥೆ ಇರುವುದಿಲ್ಲ.
ಏನೇನು ಮಾಹಿತಿ ಇರಬೇಕು?
ಮರು ಅರ್ಜಿಯಲ್ಲಿ ಈ ಹಿಂದಿನ ಅರ್ಜಿಯ ಅಂಶಗಳ ಜೊತೆಗೆ ಅರ್ಜಿದಾರರ ಹೆಸರು, ವಿಳಾಸ ಮತ್ತು ಆಧಾರ್ ಕಾರ್ಡ್ ವಿವರ ನೀಡಬೇಕಾಗುತ್ತದೆ. ನಮ್ಮ ರಾಜ್ಯದಲ್ಲೇ (Karnataka) ಇರುವ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮಾಹಿತಿ ನೀಡುವುದು ಕಡ್ಡಾಯ. ಒಂದು ವೇಳೆ ಜಾತಿ ಪ್ರಮಾಣ ಪತ್ರ ಇಲ್ಲದೇ ಇದ್ದಲ್ಲಿ, ಸ್ವಘೋಷಿತ ಜಾತಿ ಮಾಹಿತಿಯನ್ನು ನೀಡಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: 19,020 ಫಲಾನುಭವಿಗಳಿಗೆ ಒಂದೇ ಖಾತೆ: ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಭಾರೀ ಲೋಪ
ಯಾರಿಗೆಲ್ಲ ಅರ್ಜಿ ಸಲ್ಲಿಸಲು ಅವಕಾಶವಿದೆ?
ರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮನೆಯ ಯಜಮಾನಿಗೆ ಅರ್ಜಿ ಹಾಕಬಹುದು.
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು, ಮಾಹಿತಿ ನವೀಕರಿಸಬೇಕಾದವರಿಗೆ.
ಹೊಸದಾಗಿ ಯೋಜನೆಯ ಲಾಭ ಪಡೆಯಲು ಬಯಸುವ ಅರ್ಹ ಮಹಿಳೆಯರಿಗೆ.
ಬಿಪಿಎಲ್ (BPL) ಮತ್ತು ಎಪಿಎಲ್ (APL) ಕಾರ್ಡ್ ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಯಾರಿಗೆ ಅವಕಾಶವಿಲ್ಲ?
ಮೃತಪಟ್ಟಿರುವ ಗೃಹಲಕ್ಷ್ಮಿ ಫಲಾನುಭವಿಗಳ ಹೆಸರಿನಲ್ಲಿ ಮರು ಅರ್ಜಿ ಹಾಕಲು ಸಾಧ್ಯವಿಲ್ಲ.
ಆದಾಯ ತೆರಿಗೆ (Income Tax) ಪಾವತಿಸುವವರು ಹಾಗೂ ಜಿಎಸ್‌ಟಿ (GST) ಫೈಲ್ ಮಾಡುವ ಕುಟುಂಬದ ಮಹಿಳೆಯರಿಗೆ ಈ ಯೋಜನೆಯಡಿ ಅವಕಾಶವಿರುವುದಿಲ್ಲ.
