– ಖಾತೆ ವಿವರಗಳೇ ಇಲ್ಲದೆ ಕೋಟ್ಯಂತರ ಪಾವತಿ
– ಲಕ್ಷಾಂತರ ಬಾರಿ ಖಾತೆ ಬದಲಾವಣೆ
– ಲಿಖಿತ ಉತ್ತರ ಬಯಸಿದ ಸಿಎಜಿ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಅನುಷ್ಠಾನದಲ್ಲಿ ಕೆಲವು ಗಂಭೀರ ಲೋಪದೋಷಗಳು ಕಂಡುಬಂದಿದ್ದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹಾಲೇಖಪಾಲರ (CAG) ಕಚೇರಿ ಲಿಖಿತ ಉತ್ತರವನ್ನು ಬಯಸಿದೆ.
ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗವು ಯೋಜನೆಯ ದತ್ತಾಂಶವನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ ಹಲವು ತಪ್ಪು ನಡಾವಳಿಗಳು ಮತ್ತು ಕೋಟ್ಯಂತರ ರೂಪಾಯಿ ಪಾವತಿಯಲ್ಲಿನ ವ್ಯತ್ಯಾಸಗಳು ಬೆಳಕಿಗೆ ಬಂದಿವೆ.
19,020 ಫಲಾನುಭವಿಗಳಿಗೆ ಒಂದೇ ಖಾತೆ
ಡೇಟಾ ಅನಾಲಿಟಿಕ್ಸ್ ಬಳಕೆಯಿಂದ ಬಂದ ವಿಶ್ಲೇಷಣೆಯ ಪ್ರಕಾರ, ಒಟ್ಟು 19,020 ಫಲಾನುಭವಿಗಳು ಜಂಟಿಯಾಗಿ ಅಥವಾ ಒಟ್ಟಿಗೆ ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿದ್ದಾರೆ. ಫಲಾನುಭವಿಗಳು ಬೇರೆಯವರ ಖಾತೆ ಸಂಖ್ಯೆಯನ್ನು ನೀಡಿದ್ದು ಹೇಗೆ? ಅಥವಾ ಇಲಾಖೆಯು ಅದನ್ನು ಹೇಗೆ ಬಳಸಿಕೊಂಡಿತು ಮತ್ತು ಈ ಒಂದೇ ಖಾತೆಗೆ ಬರುವ ಹಣವನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಖಾತೆ ವಿವರಗಳೇ ಇಲ್ಲದೆ ಕೋಟ್ಯಂತರ ಪಾವತಿ:
ಬ್ಯಾಂಕ್ ಖಾತೆ ಸಂಖ್ಯೆಗಳನ್ನು ದಾಖಲಿಸಿಕೊಳ್ಳದೆಯೇ ಒಟ್ಟು 23,262 ಖಾತೆಗಳಿಗೆ ಪಾವತಿ ಮಾಡಲಾಗಿದ್ದು, ಇದರ ಒಟ್ಟು ಮೊತ್ತ ಸುಮಾರು 46.52 ಕೋಟಿ ರೂಪಾಯಿಗಳಾಗಿದೆ. ಈ ಕುರಿತು ಸೂಕ್ತ ವಿವರಣೆ ನೀಡುವಂತೆ ವರದಿಯಲ್ಲಿ ಕೇಳಲಾಗಿದೆ.
ಬ್ಯಾಂಕ್ ಖಾತೆ ಬದಲಾವಣೆ:
ಯೋಜನೆಯಡಿ ಈವರೆಗೆ ಒಟ್ಟು 30 ಕಂತು ಪಾವತಿಯಾಗಿದ್ದು, ಇದೇ ಫಲಾನುಭವಿಗಳಿಗೆ ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ ಸುಮಾರು 1.80 ಕೋಟಿ ರೂ. ಮೊತ್ತವನ್ನು 8,995 ಖಾತೆಗಳಿಗೆ ಪುನಃ ಪಾವತಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯೋಜನೆಗೆ ಒಳಪಟ್ಟಿರುವ ಫಲಾನುಭವಿಗಳು ಪದೇಪದೇ ಬ್ಯಾಂಕ್ ಖಾತೆಗಳನ್ನು ಬದಲಾಯಿಸುತ್ತಿದ್ದು, ಇಂತಹ 10,06,308 ದಾಖಲೆಗಳು ಪತ್ತೆಯಾಗಿವೆ.
ಎಲೆಕ್ಟ್ರಾನಿಕ್ ಡೇಟಾ ಕಂಪ್ಯೂಟರ್ ಸಿಸ್ಟಮ್ಸ್ ನಿಂದ (EDCS) ಫಲಾನುಭವಿಗಳ ಪಟ್ಟಿ ಮತ್ತು ಇತರ ವಿವರಗಳನ್ನು ಒದಗಿಸದಿರುವುದು ಆಡಿಟ್ ಪ್ರಕ್ರಿಯೆಗೆ ಹಿನ್ನಡೆಯನ್ನುಂಟು ಮಾಡಿದೆ. ರದ್ದುಪಡಿಸಲಾದ ಫಲಾನುಭವಿಗಳ ವಿವರಗಳು, ಗುರುತಿನ ಚೀಟಿ, ರದ್ದುಪಡಿಸಿದ ದಿನಾಂಕ ಮತ್ತು ಕಾರಣಗಳನ್ನು ನೀಡಲು ಇಲಾಖೆಯು ವಿಫಲವಾಗಿದೆ ಎಂದು ಸಿಎಜಿ ಅಸಮಾಧಾನ ಹೊರಹಾಕಿದೆ.
ಗೃಹಲಕ್ಷ್ಮಿ ವಿಚಾರದಲ್ಲಿ ವಿರೋಧ ಪಕ್ಷವು ಐದು ಸಾವಿರ ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡುತ್ತಲೇ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು ಮೂರು ಕಂತುಗಳು ಫಲಾನುಭವಿಗಳಿಗೆ ಲಭ್ಯವಾಗಿಲ್ಲ. 2024-25ರಲ್ಲಿ 10 ಕಂತುಗಳು ಹಾಗೂ 2025-26ರಲ್ಲಿ 11 ಕಂತುಗಳು ಬಿಡುಗಡೆಯಾಗಿದ್ದು, ಒಟ್ಟಾರೆ 3 ಕಂತುಗಳು ಬಾಕಿ ಉಳಿದಿವೆ. ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸುವ ನಿರೀಕ್ಷೆಯಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಹಾಲೇಖಪಾಲ ಕಚೇರಿಗೆ ಸೂಕ್ತ ವರದಿ ಸಲ್ಲಿಸದೇ ಕಳ್ಳಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಯೋಜನೆಯಿಂದ ಕೈಬಿಟ್ಟಿರುವ ಫಲಾನುಭವಿಗಳ ಪಟ್ಟಿಯ ವಿವರಗಳನ್ನು ಒದಗಿಸದೇ ಇರುವ ಇಲಾಖೆಯ ನಡೆಗೆ ಮಹಾಲೇಖಪಾಲರು ತಮ್ಮ ಪ್ರಾಥಮಿಕ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶೀಘ್ರವೇ ಬಸ್ ಟಿಕೆಟ್ ದರ ಏರಿಕೆ – BMTC 44%, KSRTC 33% ರಷ್ಟು ಹೆಚ್ಚಳಕ್ಕೆ ಪ್ರಸ್ತಾಪ
ಖಡಕ್ ಆದೇಶ:
ಎಜಿ ಕಚೇರಿಯಿಂದ ಈ ವಿವರಗಳನ್ನು ನೀಡುವಂತೆ ಪದೇಪದೇ ಜ್ಞಾಪನಾ ಪತ್ರಗಳನ್ನು (Reminders) ಕಳುಹಿಸಿದ್ದರೂ ಇಲಾಖೆಯು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎಜಿ ಆಡಿಟ್‌ಗೆ ಇಲಾಖೆಯು ಅಗತ್ಯ ಮಾಹಿತಿಗಳನ್ನು ನೀಡದ ಹಿನ್ನೆಲೆಯಲ್ಲಿ, ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ತಕ್ಷಣವೇ ಮಹಾಲೇಖಪಾಲರಿಗೆ ಕೈಬಿಟ್ಟ ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಸರ್ಕಾರದ ಮುಖ್ಯಸ್ಥರೇ ಖುದ್ದಾಗಿ ಸೂಚನೆ ಕೊಟ್ಟಿದ್ದರೂ ಇಲಾಖೆಯ ಅಧಿಕಾರಿಗಳು ಮಾತ್ರ ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಕೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಅಂಕಿಸಂಖ್ಯೆಯಲ್ಲಿ ಗೃಹಲಕ್ಷ್ಮಿ
ಪ್ರಸ್ತುತ ಫಲಾನುಭವಿಗಳ ಸಂಖ್ಯೆ:1,30,17,226
2026 ಏಪ್ರಿಲ್‌ನಲ್ಲಿದ್ದ ಫಲಾನುಭವಿಗಳು:1,23,38,677
ಮಾಸಿಕ ಸರಾಸರಿ ಜಮೆ: 2,470 ಕೋಟಿ ರೂ.
2023ರ ಜುಲೈನಿಂದ ಈವರೆಗೆ ಒಟ್ಟು ಪಾವತಿ: 72,251.51 ಕೋಟಿ ರೂ.
ಆರಂಭಿಕ ತಿಂಗಳುಗಳಲ್ಲಿ 1.06 ಕೋಟಿ ಫಲಾನುಭವಿಗಳಿಗೆ ಮಾಸಿಕ ಎರಡು ಸಾವಿರದಂತೆ ಸತತವಾಗಿ ಪಾವತಿಯಾಗಿದ್ದು, ಅವರೆಲ್ಲರ ಖಾತೆಗೆ ಈವರೆಗೆ ಬರೋಬ್ಬರಿ 60 ಸಾವಿರ ರೂಪಾಯಿ ಸಂದಾಯವಾಗಿದೆ. 2023-24ರಲ್ಲಿ 18,103.88 ಕೋಟಿ ರೂ.ಗಳಿಂದ ಆರಂಭವಾದ ಈ ಆರ್ಥಿಕ ನೆರವು, ಫಲಾನುಭವಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ವೃದ್ಧಿಸುತ್ತಾ ಸಾಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಕಂತುಗಳು ಪೂರ್ಣಗೊಳ್ಳುತ್ತಿದ್ದಂತೆ ಈ ಮೊತ್ತವು 75 ಸಾವಿರ ಕೋಟಿ ರೂ. ಗಡಿ ದಾಟಲಿದೆ.
