ಮುಂಬೈ: ಉದ್ಧವ್ ಠಾಕ್ರೆ (Uddhav Thackeray)ಬಣದ 14ರಿಂದ 16 ಶಾಸಕರು ಡಿಸಿಎಂ ಏಕನಾಥ್ ಶಿಂಧೆ (Eknath Shinde) ಬಣಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಆದರೆ ‘ಆಪರೇಷನ್ ಟೈಗರ್’ (Operation Tiger) ಹೆಸರಿನಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಉದ್ಧವ್ ಬಣ ಸಂಪೂರ್ಣವಾಗಿ ತಳ್ಳಿಹಾಕಿದೆ.
ಇತ್ತೀಚೆಗೆ ಉದ್ಧವ್ ಠಾಕ್ರೆ ಬಣದ ಆರು ಮಂದಿ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಈಗ ಶಾಸಕರ ಸೇರ್ಪಡೆ ಬಗ್ಗೆ ಚರ್ಚೆ ಜೋರಾಗಿದೆ.
ಮೂಲಗಳ ಪ್ರಕಾರ, ಶಿವಸೇನೆ (UBT)ಯ ಮೂವರಿಂದ ನಾಲ್ವರು ಶಾಸಕರು ಕೆಲ ದಿನಗಳ ಹಿಂದೆ ಡಿಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ 12ರಿಂದ 14 ಶಾಸಕರು ಶಿಂಧೆ ಬಣಕ್ಕೆ ಸೇರ್ಪಡೆಯಾಗಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರಂತೆ. ಆದರೆ ಈ ಭೇಟಿಯನ್ನು ಎರಡೂ ಬಣಗಳು ಅಧಿಕೃತವಾಗಿ ದೃಢಪಡಿಸಿಲ್ಲ.
ಇತ್ತೀಚೆಗೆ ಮಹಾ ವಿಕಾಸ್ ಅಘಾಡಿ (MVA) ಶಾಸಕರ ಸಭೆ ನಡೆದಿತ್ತು. ಮೈತ್ರಿಕೂಟದ 60 ಶಾಸಕರಲ್ಲಿ 37 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದರು. ಉಳಿದವರು ವೈಯಕ್ತಿಕ ಕಾರಣಗಳು ಹಾಗೂ ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳ ಕಾರಣ ಗೈರಾಗಿದ್ದರು ಎಂದು ಎಂವಿಎ ಸ್ಪಷ್ಟನೆ ನೀಡಿತ್ತು.
ಹಲವು ಶಾಸಕರ ಗೈರುಹಾಜರಿ ‘ಆಪರೇಷನ್ ಟೈಗರ್’ ಬಗ್ಗೆ ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಶಿವಸೇನೆ (UBT)ಯ 20 ಶಾಸಕರ ಪೈಕಿ 14ರಿಂದ 16 ಮಂದಿ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಶಿಂಧೆ ಬಣ ಹೇಳಿಕೊಂಡಿದೆ. ಆದರೆ ಶಾಸಕರನ್ನು ಸೆಳೆಯುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಶಿಂಧೆ ಬಣ ಹೇಳಿದೆ. ಶಾಸಕರು ಸ್ವಯಂಪ್ರೇರಿತವಾಗಿ ಸಂಪರ್ಕಿಸುತ್ತಿದ್ದಾರೆ ಎಂದು ನಾಯಕರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಬಣಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂಬ ಸುಳಿವನ್ನೂ ನೀಡಿದ್ದಾರೆ.
ಈ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ (UBT) ನಾಯಕ ಸಂಜಯ್ ರಾವತ್, ಪಕ್ಷದ ಎಲ್ಲಾ ಶಾಸಕರು ಉದ್ಧವ್ ಠಾಕ್ರೆ ಅವರ ಸಂಪರ್ಕದಲ್ಲಿದ್ದು, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಶಾಸಕರ ವಿಭಜನೆ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ನನಗೆ ಆಗಿದ್ದಿಷ್ಟೇ.. ಹೃದಯಾಘಾತ ಆಗಿರಲಿಲ್ಲ – ಅನಾರೋಗ್ಯದ ಬಳಿಕ ಕಾಣಿಸಿಕೊಂಡ ವಿನೋದ್ ಪ್ರಭಾಕರ್ ಸ್ಪಷ್ಟನೆ
ಶಿಂಧೆ ಬಣದ ಹೇಳಿಕೆಗೆ ವ್ಯಂಗ್ಯವಾಡಿದ ಸಂಜಯ್ ರಾವತ್, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ವಿಭಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಬಹುದು ಎಂದು ಟೀಕಿಸಿದರು. ‘ಆಪರೇಷನ್ ಟೈಗರ್’ನಿಂದ ನಿಜವಾದ ಆತಂಕ ಇದ್ದರೆ ಅದು ದೇವೇಂದ್ರ ಫಡ್ನವೀಸ್ ಅವರಿಗೆ ಇರಬೇಕು ಎಂದು ಅವರು ಹೇಳಿದರು.ಇದನ್ನೂ ಓದಿ: ಕರ್ನಾಟಕದ ಅಡಿಕೆ ಬೆಳೆಗಾರರ ಕತ್ತು ಹಿಸುಕಿದ ಮಹಾರಾಷ್ಟ್ರ ಸರ್ಕಾರ – ಕುಸಿದ ಅಡಿಕೆ ವಹಿವಾಟು
