Connect with us

Districts

ಕೊರಗರನ್ನು 7 ವರ್ಷ ಸತಾಯಿಸಿದ ರಾಜ್ಯ ಸರ್ಕಾರದ ವಿರುದ್ಧ ‘ಪಬ್ಲಿಕ್ ಹೀರೋ’ ಗಾಂಧಿಗಿರಿ!

Published

on

ಉಡುಪಿ: ದಲಿತ- ದಮನಿತರಿಗಾಗಿ ನಮ್ಮಜೀವನ ಮುಡಿಪು. ಪ್ರತಿ ಚುನಾವಣೆ ಬಂದಾಗ ರಾಜಕಾರಣಿಗಳ ಬಾಯಲ್ಲಿ ಪ್ರಣಾಳಿಕೆಯಲ್ಲಿ ಕೇಳಿ ಬರುವ ವಾಕ್ಯ ಇದು. ಆಮೇಲೆ ಓಟು ಹಾಕಿದವರನ್ನು ಮರೆತು ಬಿಡೋದು ಜನಪ್ರತಿನಿಧಿಗಳ ರೋಗ. ಉಡುಪಿಯಲ್ಲಿ ಇಂತದ್ದೇ ಒಂದು ಘಟನೆಯಾಗಿದೆ. ಸ್ಮಶಾನಕ್ಕೂ ಲಾಯಕ್ಕಿಲ್ಲದ ಜಮೀನು ಮಂಜೂರು ಮಾಡಿ ಅದನ್ನು ನಿವೇಶನ ಕೂಡಾ ಮಾಡಿಕೊಡದೆ ಸರ್ಕಾರ ಸತಾಯಿಸುತ್ತಿರುವ ಸ್ಟೋರಿ. ಸರ್ಕಾರದ ವಿರುದ್ಧ ನಮ್ಮ ಪಬ್ಲಿಕ್ ಹೀರೋ ಗಾಂಧಿಗಿರಿ ಮಾಡಲು ಹೊರಟ ಕಥೆಯಿದು.

ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಕೊಂಡಾಡಿ ಗ್ರಾಮ ಇದು. ಸ್ಮಶಾನಕ್ಕೂ ಲಾಯಕ್ಕಿಲ್ಲದ ಜಾಗವನ್ನು ಸರ್ಕಾರ ಕೊರಗ ಸಮುದಾಯದ 23 ಕುಟುಂಬಗಳಿಗೆ 2011ರಲ್ಲಿ ಮನೆ ಕಟ್ಟಲು ನೀಡಿತ್ತು. ಜಿಲ್ಲಾಧಿಕಾರಿ ಕಚೇರಿಯೊಳಗೆ ನಕ್ಷೆಯಲ್ಲಿ ನೋಡಿ ಜಮೀನನ್ನು ಸರ್ಕಾರ ನೀಡಿತ್ತು. ಆದರೆ ಆ ಪ್ರದೇಶ ಅಕ್ಷರಶಃ ನರಕ. ಹೊಂಡ, ಗುಂಡಿ, ಬಂಡೆಕಲ್ಲು ತುಂಬಿದ ನಿರ್ಜನ ಕಾಡು. ಜಮೀನು ಸಮತಟ್ಟು ಮಾಡಲು ಸರ್ಕಾರದಿಂದ 3 ಲಕ್ಷ ಮಂಜೂರಾದರೂ ಅದು ತಲುಪಿಲ್ಲ.

ಸಂತ್ರಸ್ಥೆ ಹೇಳಿದ್ದು ಹೀಗೆ: ಸಂತ್ರಸ್ಥೆ ಮಹಾಲಕ್ಷ್ಮೀ ಮತ್ತು ಸುಬೇಧ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು 7 ವರ್ಷ ನಾಯಿಗಳ ಹಾಗೆ ಸರ್ಕಾರಿ ಕಚೇರಿಗಳಿಗೆ ಸುತ್ತಾಡಿ ಸುತ್ತಾಡಿ ಸತ್ತು ಹೋಗಿದ್ದೇವೆ. ಕೊನೆಗೆ ನಮಗೆ ಆಸರೆಯಾಗಿ ಕಾಣಿಸಿದ್ದು ಡಾ. ರವೀಂದ್ರನಾಥ ಶಾನುಭಾಗ್. ಅವರ ಬಳಿ ಬಂದ ಮೇಲೂ ಕೂಡಾ ಒಂದು ಬಾರಿ ಎಲ್ಲರನ್ನು ಸಂಪರ್ಕಿಸಿ ಆಯ್ತು. ಆಗಲೂ ಕೆಲಸ ಆಗದಿದ್ದಾಗ ಶಾನುಭಾಗರೇ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ನಾವು ಹೆದರಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ಹಣಕ್ಕಾಗಿ ಕಾಯಬೇಡಿ ನೀವೇ ಹಣ ಹೊಂದಿಸಿ ಜಮೀನು ಹದ ಮಾಡಿ ಎಂದು ಆಗಿನ ಡಿಸಿ ಎಂಟಿ ರೇಜು ಸಲಹೆ ಕೊಟ್ಟಿದ್ದರು. ಅದರಂತೆ ಎರಡು ಹೊತ್ತು ಊಟಕ್ಕೆ ಕಷ್ಟಪಡುವವರು ಸಾಲ ಸೋಲ ಮಾಡಿ ಒಂದೊಂದು ಕುಟುಂಬ ಐದೈದು ಸಾವಿರ ಒಟ್ಟು ಮಾಡಿತ್ತು. ಒಂದು ಲಕ್ಷ ಮೂವತ್ತೈದು ಸಾವಿರ ಹೊಂದಿಸಿ ಜಮೀನನ್ನು ಸಮತಟ್ಟು ಮಾಡಲು ಶುರುಮಾಡಿತು.

ಬಂಡೆಕಲ್ಲುಗಳು ತುಂಬಿದ ಬೋಳುಗುಡ್ಡದ ಒಂದು ಭಾಗವನ್ನು ಸಮತಟ್ಟು ಮಾಡಲು ಸಾಧ್ಯವಾಗಿರಲಿಲ್ಲ. ಅದಾಗಿ ನಾಲ್ಕು ವರ್ಷ ಮನವಿ ಮೇಲೆ ಮನವಿ ಕೊಡುತ್ತಾ ಬಂದರೂ ಕೆಲಸ ನಡೆಯಲಿಲ್ಲ. ಕಾದು ಕಾದು ಬೇಸತ್ತ 23 ಕುಟುಂಬದವರು ಉಡುಪಿಯ ಮಾನವಹಕ್ಕುಗಳ ಪ್ರತಿಷ್ಟಾನವನ್ನು ಸಂಪರ್ಕಿಸಿದೆ. ಈ ಸಂಸ್ಥೆ 1 ವರ್ಷ ಹೋರಾಟ ಮಾಡಿದ್ರೂ ಸರ್ಕಾರ ಕಣ್ಣು ಬಿಡಲೇ ಇಲ್ಲ. ಸರ್ಕಾರದಿಂದ ಕೆಲಸ ಆಗುವುದಿಲ್ಲ ಎಂದು ಗೊತ್ತಾದ ಮೇಲೆ ನಮ್ಮ ಪಬ್ಲಿಕ್ ಹೀರೋ ಡಾ. ರವೀಂದ್ರನಾಥ ಶಾನುಭಾಗ್ ಗಾಂಧಿಗಿರಿ ಮಾಡಲು ಹೊರಟಿದ್ದಾರೆ. ದಾನಿಗಳು ಮತ್ತು ಸಂಸ್ಥೆಯ ಸದಸ್ಯರು ಹಣ ಹಾಕಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ಶಾನುಭಾಗ್ ಹೇಳಿದ್ದು ಹೀಗೆ: ಸಣ್ಣ ನಿವೇಶನಕ್ಕಾಗಿ ಕೊರಗರು ಹೋರಾಡುವುದು ಇಷ್ಟು ಕಷ್ಟವಿದೆಯಾ? 2011ರಲ್ಲಿ ಹಕ್ಕು ಪತ್ರ ಕೊಟ್ಟರೂ 7 ವರ್ಷ ಜಮೀನು ಸಮತಟ್ಟು ಮಾಡಲು ಬೇಕಾ? ಸರ್ಕಾರ ಹೇಳುವ ಅಹಿಂದಾ ಬೆಂಬಲ ಎಷ್ಟರ ಮಟ್ಟಿಗೆ ನಂಬುವುದು? ಸರ್ಕಾರ ರಿಜೆಕ್ಟ್ ಮಾಡಲು ಯಾವುದೇ ಕಾರಣಗಳಿಲ್ಲ. ಮಾನವಹಕ್ಕುಗಳ ಪ್ರತಿಷ್ಟಾನ ಈ ಕೊರಗ ಕುಟುಂಬದ ಜೊತೆ ಕೊನೆಯವರೆಗೆ ನಿಲ್ಲುತ್ತದೆ. ಜಮೀನು ಸಮತಟ್ಟು ಮಾಡಿಸಿ, ಮನೆ ಕಟ್ಟಿ ಕುಟುಂಬಗಳು ಅಲ್ಲಿ ನೆಲೆಸುವವರೆಗೆ ಆ ನಂತರದ ಸಮಸ್ಯೆಗಳ ಬಗ್ಗೆ ಕೂಡಾ ಮಾನವ ಹಕ್ಕುಗಳ ಹೋರಾಟ ಪ್ರತಿಷ್ಟಾನ ಬೆಂಬಲವಾಗಿ ನಿಲ್ಲುತ್ತದೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

23 ಕುಟುಂಬಗಳು, ಅವರ ಸಂಬಂಧಿಕರು, ಮಣಿಪಾಲ ವಿಶ್ವವಿದ್ಯಾನಿಲಯದ ಸುಮಾರು 600 ಸ್ವಯಂಸೇವಕ ಸಂಘದ ಸದಸ್ಯರು ಜಮೀನು ಸಮತಟ್ಟು ಮಾಡಲು ನಾವು ಸಿದ್ಧರೆಂದು ಘೋಷಿಸಿದ್ದಾರೆ. ಒಟ್ಟಿನಲ್ಲಿ ಈ ಭೂಮಿಯ ಮೂಲ ನಿವಾಸಿಗಳಿಗೆ ನೆಲೆಯಿಲ್ಲದಂತಾಗಿರೋದು ನಾಚಿಕೆಗೇಡಿನ ವಿಚಾರ.

https://www.youtube.com/watch?v=mUP-1N8wHHE

 

Click to comment

Leave a Reply

Your email address will not be published. Required fields are marked *