– ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ
– ನಟ ಪ್ರೀತಂಗೆ ಮಾಲೀಕತ್ವದ ರೆಸ್ಟೋ ಪಬ್
ಮೈಸೂರು: ಮೈಸೂರಿನ (Mysuru pub fire accident) ದಟ್ಟಗಳ್ಳಿ 4ನೇ ಹಂತದಲ್ಲಿರುವ ಫಾಕ್ಸ್ ಜೆನ್ ರೆಸ್ಟೋ ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಏಳು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅವಘಡದಲ್ಲಿ ಡಾರ್ಜಿಲಿಂಗ್ ಮೂಲದ 26 ವರ್ಷದ ಸಾಹಿನ್ ಹಾಗೂ ನೇಪಾಳ ಮೂಲದ 24 ವರ್ಷದ ಪ್ರಕಾಶ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸೋನು, ರಮೇಶ್, ಮಹದೇವ ಪ್ರಸಾದ್, ಪ್ರಜ್ವಲ್, ಅವಿನಾಶ್ ಹಾಗೂ ಪಬ್ ಮಾಲೀಕ ಪ್ರೀತಂ ಗಾಯಗೊಂಡಿದ್ದಾರೆ.
ಬೆಂಕಿ ಕಾಣಿಸಿಕೊಂಡ ವೇಳೆ ಪಬ್‌ನಲ್ಲಿದ್ದ ಸುಮಾರು 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪಬ್‌ನ ಒಳಾಂಗಣ ವಿನ್ಯಾಸಕ್ಕಾಗಿ ಬಳಸಲಾಗಿದ್ದ ಒಣ ಹುಲ್ಲು, ಬಿದಿರಿನ ಪೀಠೋಪಕರಣಗಳು ಹಾಗೂ ಮರದ ವಸ್ತುಗಳಿಂದ ಬೆಂಕಿ ವೇಗವಾಗಿ ವ್ಯಾಪಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಾಯ
ಈ ರೆಸ್ಟೋ ಪಬ್ ನಟ ಪ್ರೀತಂ ಅವರ ಮಾಲಿಕತ್ವದಲ್ಲಿದೆ. ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದ ನಾಯಕನಾಗಿದ್ದ ಪ್ರೀತಂ, ಶ್ರೀರಂಗಪಟ್ಟಣದ ಬಳಿ ರಿವರ್ ರಾಂಚ್ ರೆಸಾರ್ಟ್ ಕೂಡ ನಡೆಸುತ್ತಿದ್ದಾರೆ.
ಘಟನೆ ಸಂಭವಿಸಿದ ವೇಳೆ ಪ್ರೀತಂ ಹಾಗೂ ಅವರ ಸ್ನೇಹಿತ ಅವಿನಾಶ್ ಸ್ಥಳದಲ್ಲೇ ಇದ್ದರು. ಅವಿನಾಶ್ ಅವರಿಗೆ ತಲೆಗೆ ಸುಟ್ಟ ಗಾಯಗಳಾಗಿದ್ದು, ಪ್ರೀತಂ ಅವರ ಕೈ ಹಾಗೂ ಮುಖಕ್ಕೆ ಗಾಯಗಳಾಗಿವೆ.
ದಕ್ಷಿಣ ಆಫ್ರಿಕಾದ ಮಾರಾ ಜನಾಂಗದ ಥೀಮ್ ಆಧಾರಿತ ಈ ರೆಸ್ಟೋ ಪಬ್‌ನಲ್ಲಿ ಸೋಮವಾರ ವಿಶೇಷ ಆಫರ್ ಘೋಷಿಸಲಾಗಿತ್ತು. ಯಾವುದೇ ಆಹಾರ ಪದಾರ್ಥ ಖರೀದಿಸಿದರೂ 175 ರೂಪಾಯಿ ದರ ನಿಗದಿಪಡಿಸಲಾಗಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಬಂಕ್‌ಗೆ ರೈತರ ಮುತ್ತಿಗೆ – ಹೆದ್ದಾರಿ ತಡೆದು ಪ್ರತಿಭಟನೆ
