ಗಾನಕೋಗಿಲೆ ಎಸ್. ಜಾನಕಿ (S Janaki) ಅವರ ಹೆಸರು ಕೇಳಿದರೆ ಸಾಕು, ಕನ್ನಡಿಗರ ಮನಸ್ಸಿನಲ್ಲಿ ಅನೇಕ ಮಧುರ ಗೀತೆಗಳು ಮೂಡಿ ಬರುತ್ತವೆ. ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ಕಂಠದಿಂದ ಲಕ್ಷಾಂತರ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಜಾನಕಿ ಅಮ್ಮ, ಇಂದಿಗೂ ಸಂಗೀತ ಲೋಕದ ಅಮೂಲ್ಯ ಧ್ವನಿಯಾಗಿ ಉಳಿದಿದ್ದಾರೆ.
ಚಿತ್ರಗೀತೆಗಳ ಜೊತೆಗೆ ಭಕ್ತಿ ಸಂಗೀತದಲ್ಲೂ ಎಸ್. ಜಾನಕಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹರಿದಾಸರ ಕೀರ್ತನೆಗಳು, ಶರಣರ ವಚನಗಳು ಹಾಗೂ ಭಕ್ತಿಪ್ರಧಾನ ಹಾಡುಗಳಿಗೆ ಅವರು ನೀಡಿದ ಧ್ವನಿ ಇಂದಿಗೂ ಭಕ್ತರನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯುತ್ತದೆ. ಇವರು ಕನ್ನಡದಲ್ಲಿ ಹಾಡಿದ ʼಗಜಮುಖನೇ ಗಣಪತಿಯೇʼ, ʼಮಲೆನಾಡಿನ ಸೊಬಗಿನ ಐಸಿರಿ ಚಲುವಿನ ವರ ಶೃಂಗೇರಿʼ, ʼಇವಳೇ ವೀಣಾಪಾಣಿʼ ಇನ್ನೂ ಅನೇಕ ಹಾಡುಗಳು ಇಂದಿಗೂ ಜನರ ಮನಗಳಲ್ಲಿವೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ಅವರಿಗೆ ‘ನಾದ ದೇವತೆ’ ಎಂಬ ಬಿರುದು ನೀಡಿರುವುದು ಅವರ ಗಾಯನದ ಮಹತ್ವವನ್ನು ತೋರಿಸುತ್ತದೆ.
ಜಾನಕಿ ಅಮ್ಮ ಸುಮಾರು 20 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆದರೆ ಅವರ ಸಂಪೂರ್ಣ ಗಾಯನ ಜೀವನದಲ್ಲೇ ಅತ್ಯಂತ ಕಷ್ಟದ ಹಾಡು ಎಂದರೆ ‘ಹೇಮಾವತಿ’ (1977) ಚಿತ್ರದ “ಶಿವ ಶಿವ ಎನ್ನದ ನಾಲಿಗೆ ಏಕೆ…” ಎಂಬ ಹಾಡು. ಈ ಹಾಡು ಕರ್ನಾಟಕ ಶಾಸ್ತ್ರೀಯ ಸಂಗೀತದ ಕಠಿಣ ರಾಗಗಳಾದ ತೋಡಿ ಮತ್ತು ಅಭೋಗಿ ರಾಗಗಳ ಮಿಶ್ರಣದಲ್ಲಿ ಮೂಡಿಬಂದಿತ್ತು.ಇದನ್ನೂ ಓದಿ: ಜಾನಕಿಗೆ ಸಂಗೀತವೇ ಉಸಿರಾದರೆ, ಜಾನಕಿಯನ್ನೇ ಉಸಿರಾಗಿಸಿಕೊಂಡಿದ್ದರು ರಾಮಪ್ರಸಾದ್!
ಈ ಹಾಡಿನ ಬಗ್ಗೆ ಜಾನಕಿ ಅಮ್ಮ ಸ್ವತಃ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಹಾಡಿನ ಸ್ವರ ಮತ್ತು ರಾಗದ ಕಠಿಣತೆ ನೋಡಿ ಆರಂಭದಲ್ಲಿ ತಮಗೆ ಭಯವಾಗಿತ್ತು. ಹಾಡು ಚೆನ್ನಾಗಿ ಆಗಲಿ ಎಂದು ದೇವರಿಗೆ 100 ರೂಪಾಯಿ ಹರಕೆ ಹೊತ್ತು ನಂತರ ಹಾಡಿದ್ದಾಗಿ ಅವರು ನೆನಪಿಸಿಕೊಂಡಿದ್ದರು. ಈ ಹಾಡಿನ ಕಠಿಣತೆಯನ್ನು ಖ್ಯಾತ ಪಿಟೀಲು ವಿದ್ವಾಂಸ ಎಂ.ಎಸ್. ಗೋಪಾಲಕೃಷ್ಣನ್ ಕೂಡ ಮೆಚ್ಚಿಕೊಂಡಿದ್ದರು.
ಎಸ್. ಜಾನಕಿ – ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೋಡಿಯ ಮೋಡಿ
ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ ಎಸ್. ಜಾನಕಿ ಮತ್ತು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜೋಡಿ ವಿಶೇಷ ಸ್ಥಾನ ಪಡೆದಿದೆ. ಇಬ್ಬರ ಧ್ವನಿಯ ಹೊಂದಾಣಿಕೆ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಜೀವ ತುಂಬಿತು. ರಾಜನ್-ನಾಗೇಂದ್ರ, ಹಂಸಲೇಖ ಹಾಗೂ ಉಪೇಂದ್ರ ಕುಮಾರ್ ಸಂಗೀತದಲ್ಲಿ ಮೂಡಿಬಂದ ಈ ಜೋಡಿಯ ಹಾಡುಗಳು ಇಂದಿಗೂ ಸಂಗೀತ ಪ್ರೇಮಿಗಳ ನೆಚ್ಚಿನ ಹಾಡುಗಳಾಗಿವೆ.
ಅನೇಕ ರಾಷ್ಟ್ರೀಯ ಪ್ರಶಸ್ತಿಗಳು, ರಾಜ್ಯ ಪ್ರಶಸ್ತಿಗಳು ಮತ್ತು ಗೌರವ ಡಾಕ್ಟರೇಟ್‌ಗಳನ್ನು ಪಡೆದಿದ್ದರೂ, ಎಸ್. ಜಾನಕಿ ತಮ್ಮ ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಮನ ಗೆದ್ದಿದ್ದಾರೆ. ಅವರ ಧ್ವನಿ, ವಿನಯ ಮತ್ತು ಸಂಗೀತದ ಮೇಲಿನ ಪ್ರೀತಿ ಇಂದಿಗೂ ಹೊಸ ತಲೆಮಾರಿನ ಗಾಯಕರಿಗೆ ಪ್ರೇರಣೆಯಾಗಿದೆ.ಇದನ್ನೂ ಓದಿ: ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ನಿಧನಕ್ಕೆ ಹಿರಿಯ ನಟಿ ಉಮಾಶ್ರೀ ಕಂಬನಿ
