ಮೈಸೂರು: ವಿಧಿವಶರಾಗಿರುವ ಗಾನಕೋಗಿಲೆ ಎಸ್. ಜಾನಕಿ (S Janaki) ಅವರ ಅಂತ್ಯಸಂಸ್ಕಾರದ ಸಿದ್ಧತೆಗಳು ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದಲ್ಲಿ (Kaniyanahundi Village) ಭರದಿಂದ ಸಾಗುತ್ತಿದ್ದು, ಇಂದು ಸಂಜೆ 5:30ರ ಒಳಗೆ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ.
ಜಾನಕಿಯಮ್ಮ ಅವರು ಬದುಕಿದ್ದಾಗ, ತಮ್ಮ ನಿಧನದ ನಂತರ ತಮ್ಮ ನೆಚ್ಚಿನ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂದು ಆಸೆ ವ್ಯಕ್ತಪಡಿಸಿದ್ದರು. ಅವರ ಕೊನೆಯ ಕೋರಿಕೆಯಂತೆ ಕಣಿಯನಹುಂಡಿ ಗ್ರಾಮದಲ್ಲಿರುವ ಅವರ ತೋಟದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಜೆಸಿಬಿ ಯಂತ್ರಗಳ ಮೂಲಕ ತೋಟದ ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ಬಸವರಾಜು “ಸ್ವರ ಸಾಮ್ರಾಟೆ ಎಸ್. ಜಾನಕಿ ಅವರು ತಮ್ಮ ಬದುಕಿನ ಕಡೆಯ ದಿನಗಳನ್ನು ಕಣಿಯನಹುಂಡಿ ಗ್ರಾಮದಲ್ಲೇ ಕಳೆಯಲು ಗಟ್ಟಿ ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕಾಗಿ ಅವರು ಇಲ್ಲಿ ಎರಡು ಎಕರೆ ಜಮೀನನ್ನು ಖರೀದಿ ಮಾಡಿಸಿದ್ದರು. ನಾವೇ ಖುದ್ದಾಗಿ ನಿಂತು ಅವರಿಗೆ ಈ ಜಮೀನನ್ನು ಕೊಡಿಸಿದ್ದೆವು” ಎಂದು ತಿಳಿಸಿದರು.
“ಬಹಳ ಪ್ರೀತಿಯಿಂದ ಜಮೀನು ಕೊಂಡಿದ್ದ ಜಾನಕಿಯಮ್ಮ ಅವರು, ಅಲ್ಲಿ ತಮಗಾಗಿ ಒಂದು ಸುಂದರವಾದ ಮನೆಯನ್ನು ಕಟ್ಟುವ ಬಗ್ಗೆಯೂ ನಮ್ಮೊಂದಿಗೆ ಹಲವು ಬಾರಿ ಮಾತನಾಡಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಕಡೆಯ ದಿನಗಳಲ್ಲಿ ಅವರು ಕಟ್ಟಬಯಸಿದ್ದ ಮನೆಯ ಜಾಗದಲ್ಲೇ, ಅವರ ಕೊನೆಯ ಆಸೆಯಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ” ಎಂದು ಬಸವರಾಜು ಭಾವುಕರಾಗಿ ನುಡಿದರು. ಇದನ್ನೂ ಓದಿ: ಜಾನಕಿ ಅಮ್ಮನ ಸ್ಮಾರಕ ನಿರ್ಮಾಣಕ್ಕೆ ಹಂಸಲೇಖ ಮನವಿ
ಕಣಿಯನಹುಂಡಿ ಗ್ರಾಮಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಭೇಟಿ ನೀಡಿ, ಭದ್ರತಾ ವ್ಯವಸ್ಥೆ ಹಾಗೂ ಅಂತಿಮ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭದ್ರತೆಯ ವಿವರಗಳನ್ನು ಹಂಚಿಕೊಂಡರು.
ಅಂತ್ಯಸಂಸ್ಕಾರ ನಡೆಯುವ ಸ್ಥಳದಲ್ಲಿ ಯಾವುದೇ ಗೊಂದಲ ನಿರ್ಮಾಣವಾಗದಂತೆ ತಡೆಯಲು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 2 ಕೆ.ಎಸ್.ಆರ್.ಪಿ (KSRP) ತುಕಡಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಶಿವ ಶಿವ ಎನ್ನದ ನಾಲಿಗೆ ಏಕೆ.. 100 ರೂ. ಹರಕೆ ಹೊತ್ತು ಹಾಡಿದ್ದ ಜಾನಕಿ
ಕಣಿಯನಹುಂಡಿ ಗ್ರಾಮಕ್ಕೆ ಹೋಗುವ ರಸ್ತೆ ಸಾಕಷ್ಟು ಕಿರಿದಾಗಿರುವುದರಿಂದ, ವಾಹನ ಸವಾರರಿಗೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸರು ವಿಶೇಷ ಟ್ರಾಫಿಕ್ ಪ್ಲಾನ್ ಮಾಡಿಕೊಂಡಿದ್ದಾರೆ.
ಜಾನಕಿಯಮ್ಮ ಅವರ ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಿ ಚಲನಚಿತ್ರ ರಂಗದ ಖ್ಯಾತ ನಟ-ನಟಿಯರು, ನಿರ್ದೇಶಕರು ಹಾಗೂ ಸರ್ಕಾರದ ಪರವಾಗಿ ಸಚಿವರು ಮತ್ತು ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅಂತಿಮ ಕ್ಷಣದಲ್ಲಿ ಭಾಗವಹಿಸಲು ಕನಿಷ್ಠ 2 ರಿಂದ 3 ಸಾವಿರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಬರುವ ಸಾಧ್ಯತೆಯಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ.
