ನವದೆಹಲಿ: ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನವ ಕರ್ನಾಟಕ ರೈತ ಸಂಘವು (Nava Karnataka Raitha Sangha) ಜು.25, 26 ಮತ್ತು 27ರಂದು ಕಲಬುರಗಿಯಲ್ಲಿ (Kalaburagi) ಮೂರು ದಿನಗಳ ಬೃಹತ್ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಆಯೋಜಿಸಿದೆ.
ಗ್ರಾಮಸ್ವರಾಜ್ಯ, ಆಹಾರ ಪದ್ಧತಿ ಹಾಗೂ ಬೆಂಬಲ ಬೆಲೆ ವಿಷಯಗಳನ್ನು ಕೇಂದ್ರೀಕರಿಸಿ ಈ ವಿಚಾರ ಸಂಕೀರ್ಣ ನಡೆಯಲಿದೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಮತ್ತು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಸಿ. ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಇಡೀ ಚೆನ್ನೈ ಟೀಂ ಮೇಲೆ ದಂಡಾಸ್ತ್ರ – ಋತುರಾಜ್ ಗಾಯಕ್ವಾಡ್‌ಗೆ ಬರೋಬ್ಬರಿ 24 ಲಕ್ಷ ರೂ. ದಂಡ
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರು, ರೈತರೇ ದೇಶದ ಬೆನ್ನೆಲುಬು. ಆದರೆ ರೈತರ ಬದುಕು ಅಸಹನೀಯವಾಗುತ್ತಿದೆ. ದಲ್ಲಾಳಿಗಳು ರೈತರ ಶ್ರಮವನ್ನು ದುರುಪಯೋಗಪಡಿಸಿಕೊಂಡು ಲಾಭ ಪಡೆಯುತ್ತಿದ್ದಾರೆ. ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಚಾರ ಸಂಕೀರ್ಣದಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ನಾನಾ ಪಾಟೇಕರ್, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರೈತರ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರೋದು ಅತಿರೇಕ ಆಗ್ತಿದೆ – ಯತ್ನಾಳ್
ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಸಿ. ಪಾಟೀಲ್ ಮಾತನಾಡಿ, ಸ್ವಾತಂತ್ರ‍್ಯ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕೃಷಿಯೇತರ ಸಮುದಾಯ ಸಂಭ್ರಮದಲ್ಲಿದ್ದರೆ ಕೃಷಿಕ ಮತ್ತು ಅವನ ಬೆನ್ನೆಲುಬಾಗಿರುವ ಕೃಷಿ ಕಾರ್ಮಿಕರು ಮಾತ್ರ ತಮ್ಮ ಅವಶ್ಯಕತೆಗಳಿಗೆ ಕೈ ಚಾಚಿ ನಿಲ್ಲುವಂತಾಗಿದೆ. ಅನ್ನಕ್ಕಾಗಿ ರೇಷನ್ ಅಂಗಡಿ, ಕೆಲಸಕ್ಕಾಗಿ, ಬೀಜ, ಗೊಬ್ಬರಗಳಿಗಾಗಿ ಕಚೇರಿ ಎದುರು ನಿಲ್ಲುವಂತಾಗಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಸ್ವಾವಲಂಬಿಯಾಗಿದ್ದ ರೈತ ಇಂದು ಪರಾವಲಂಬಿಯಾಗಿದ್ದಾನೆ. ಇದಕ್ಕೆಲ್ಲ ಕಾರಣ ಕಳೆದ 75 ವರ್ಷಗಳಿಂದ ಬಂದಂತಹ ಕೃಷಿ ಮತ್ತು ಕೃಷಿಯೇತರ ನೀತಿಗಳ ನಿರ್ಣಯಗಳು ಎಂದರು.
ರೈತ ಸಾಲದ ಸುಳಿಯಲ್ಲಿ ಸಿಕ್ಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ, ಯುವ ಪೀಳಿಗೆ ಉದ್ಯೋಗವಿಲ್ಲದೇ, ಪಟ್ಟಣದತ್ತ ಸಾಗಿ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಯುವಕರಿಗೆ ಹೆಚ್ಚಿನ ರೀತಿಯಲ್ಲಿ ಉದ್ಯೋಗವಕಾಶ ಕಲ್ಪಿಸಬೇಕು. ದೇಶದ ಮತ್ತು ರಾಜ್ಯದ ಅನೇಕ ಗಣ್ಯರು, ಪ್ರಜ್ಞಾವಂತರು ಗ್ರಾಮಸ್ವರಾಜ, ಆಹಾರ ಪದ್ಧತಿ ಹಾಗೂ ಬೆಂಬಲ ಬೆಲೆ ವಿಷಯ ಕುರಿತು ತಜ್ಞರು ಭಾಗವಹಿಸಿ ನಮಗೆಲ್ಲಾ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಇಡೀ ಚೆನ್ನೈ ಟೀಂ ಮೇಲೆ ದಂಡಾಸ್ತ್ರ – ಋತುರಾಜ್ ಗಾಯಕ್ವಾಡ್‌ಗೆ ಬರೋಬ್ಬರಿ 24 ಲಕ್ಷ ರೂ. ದಂಡ

