ಗದಗ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನ ಭಾಗ್ಯದ ಅಕ್ಕಿಯನ್ನು (Anna Bhagya Scheme Rice) ಕಾಳಸಂತೆಯಲ್ಲಿ ಮಾರಾಟ ಮಾಡಿ ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದ ಜಾಲವನ್ನು ಗದಗ ಪೊಲೀಸರು (Gadag Police) ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.
ಗದಗ ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜ್ ಬಳಿ ಸಂಚರಿಸುತ್ತಿದ್ದ ಮಧ್ಯಪ್ರದೇಶ ನೋಂದಣಿಯ ಲಾರಿಯನ್ನು ತಡೆದ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಿಂದ ಹೊರಟಿದ್ದ ಈ ಲಾರಿ ಗದಗ, ಇಳಕಲ್ ಮಾರ್ಗವಾಗಿ ಗುಜರಾತ್‌ಗೆ(Gujarat) ಅಕ್ಕಿಯನ್ನು ಸಾಗಿಸುತ್ತಿತ್ತು.
ಏನು ಜಪ್ತಿ ಮಾಡಲಾಗಿದೆ?
ಅಂದಾಜು 14 ಲಕ್ಷ ರೂ ಮೌಲ್ಯದ 34,720 ಕೆಜಿ (347 ಕ್ವಿಂಟಾಲ್) ಅಕ್ಕಿ, 29 ಲಕ್ಷ ರೂಪಾಯಿ ಮೌಲ್ಯದ ಬೃಹತ್ ಲಾರಿ ಸೇರಿದಂತೆ ಸುಮಾರು 43 ಲಕ್ಷ ರೂಪಾಯಿ ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ತೆಯಾದ ಅಕ್ಕಿಯನ್ನು ಪಡಿತರ ಅಕ್ಕಿಯಲ್ಲ ಎಂದು ಬಿಂಬಿಸಲು ಪಾಲಿಶ್ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಇದು ಪಡಿತರ ಅಕ್ಕಿಯಲ್ಲ ಎಂದು ತೋರಿಸಲು ನಕಲಿ ಬಿಲ್‌ಗಳನ್ನು (Fake Bills) ಸೃಷ್ಟಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಧಿಕಾರಿಗಳು ಲಾರಿಯನ್ನು ಪರಿಶೀಲಿಸಿದಾಗ ಅಕ್ಕಿಯ ಬೃಹತ್ ಜಾಲ ನೋಡಿ ಒಂದು ಕ್ಷಣ ದಂಗಾಗಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿ ʻಕಮಲʼ ಬಿತ್ತಿದ ಕಾಫಿನಾಡಿನ ಕೃಷಿಕ!
ಈ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಮಾಲೀಕನ ವಿರುದ್ಧ ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಪ್ತಿ ಮಾಡಿದ ಅಕ್ಕಿ ಮೂಟೆಗಳನ್ನು ಕೆಎಫ್‌ಸಿಎಸ್‌ಸಿ (KFCSC) ಗೋಡೌನ್‌ಗೆ ರವಾನಿಸಲಾಗಿದೆ. ಆಹಾರ ನಿರೀಕ್ಷಕ ಜಗದೀಶ್ ಅಮಾತಿ ಅವರು ಪ್ರಕರಣದ ಮುಂದಿನ ಕಾನೂನು ಕ್ರಮಗಳ ಉಸ್ತುವಾರಿ ವಹಿಸಿದ್ದಾರೆ.

