ಚಿಕ್ಕಮಗಳೂರು: ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ (BJP) ಅಭೂತಪೂರ್ವ ಗೆಲುವಿಗೆ ಕಾಫಿನಾಡಿನ ಯುವಕನ ಚಾಣಾಕ್ಷ ತಂತ್ರಗಾರಿಕೆಯ ಅಳಿಲು ಸೇವೆ ಅಡಗಿದೆ.
ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಅರುಣ್ ಅವರು ಈ ಸಂಘಟನಾತ್ಮಕ ಯಶಸ್ಸಿನ ರೂವಾರಿಯಾಗಿದ್ದಾರೆ. ದೇಶ ಸೇವೆಯ ಆಸೆಯಿಂದ ತಿಂಗಳಿಗೆ 1 ಲಕ್ಷ ರೂ. ಸಂಬಳದ ಟೊಯೋಟೋ ಕಂಪನಿಯ ಸಿನಿಯರ್ ಮ್ಯಾನೇಜರ್ ಕೆಲಸಕ್ಕೆ ರಾಜೀನಾಮೆ ನೀಡಿ, ತಾವು ನಂಬಿದ ಸಿದ್ಧಾಂತಕ್ಕೆ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಫಲಿತಾಂಶ ಬಂದ ಬಳಿಕ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅವರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದಕ್ಕೆ ನನ್ನ ಪಿಎ ಹತ್ಯೆ: ಸುವೇಂದು ಅಧಿಕಾರಿ
ಅರುಣ್, ಬಂಗಾಳದ ಚುನಾವಣಾ ಕಣದ ನಾರ್ತ್ ಝೋನ್ ಸಿಲಿಗುರಿ ವಿಭಾಗದ ಸಂಘಟನಾ ಪ್ರಭಾರಿಯಾಗಿ ಗೆಲುವಿನ ತಂತ್ರ ಹೆಣೆದಿದ್ದರು. ರಾಜಕೀಯ ಪಿತೂರಿಗಳಿಂದಾಗಿ ಕೆಲ ಕಾಲ ಸಂಘಟನೆಯಿಂದ ದೂರ ಉಳಿದು, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮತ್ತೆ ಪಕ್ಷ ವಹಿಸಿದ ಹೊಸ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಿಂಗಳುಗಟ್ಟಲೆ ದೂರದ ಬಂಗಾಳದ ನೆಲದಲ್ಲಿ ಕೆಲಸ ಮಾಡುವ ಮೂಲಕ ಕರ್ನಾಟಕದ ಹುಡುಗನೊಬ್ಬ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆಯ ದಾಖಲೆ ಮತಗಳು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ವಿರೋಧ ಪಕ್ಷದ ಪ್ರಬಲ ನಾಯಕರ ವಿರುದ್ಧ ನಡೆಸಿದ ಸಂಘಟನಾತ್ಮಕ ಹೋರಾಟದಲ್ಲಿ ಅರುಣ್ ಪಾತ್ರ ಬಹಳ ದೊಡ್ಡದಿತ್ತು. ಇದನ್ನೂ ಓದಿ: ದೀದಿ ಸೋಲಿಸಿದ ಬಿಜೆಪಿ ಅಭ್ಯರ್ಥಿ ಪಿಎಗೆ ಗುಂಡಿಕ್ಕಿ ಹತ್ಯೆ – ʻಕೋಲ್ಡ್ ಬ್ಲಡ್ ಮರ್ಡರ್ʼ ಎಂದ ಸುವೇಂದು ಅಧಿಕಾರಿ

