ಕೋಲ್ಕತ್ತಾ: ಮಮತಾ ಬ್ಯಾನರ್ಜಿಯವರನ್ನು (Mamata Banerjee) ಭವಾನಿಪುರದಲ್ಲಿ ಸೋಲಿಸಿದ್ದಕ್ಕೆ ನನ್ನ ಪಿಎ ಚಂದ್ರನಾಥ್ ರಥ (Chandranath Rath) ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ (BJP) ನಾಯಕ ಸುವೇಂದು ಅಧಿಕಾರಿ (Suvendu Adhikari) ಗಂಭಿರ ಆರೋಪ ಮಾಡಿದ್ದಾರೆ.
ರಥ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಮಧ್ಯಮಗ್ರಾಮದಲ್ಲಿರುವ ಅವರ ನಿವಾಸಕ್ಕೆ ತರುವಾಗ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಕೊಲೆ ನಡೆದ ರೀತಿಯನ್ನು ನಾವು ಎಷ್ಟು ಖಂಡಿಸಿದರೂ ಸಾಲದು. ನನ್ನ ಸಹಾಯಕರಾಗಿದ್ದಕ್ಕೆ ರಥ ಅವರನ್ನು ಕೊಲ್ಲಲಾಗಿದೆ. ಈ ಕೊಲೆ ಪೂರ್ವಯೋಜಿತ ಎಂದು ದೂರಿದರು. ಇದನ್ನೂ ಓದಿ: ಫೇಕ್ ನಂಬರ್ ಪ್ಲೇಟ್, ನಾಲ್ಕೇ ಗುಂಡು – ಸುವೇಂದು ಅಧಿಕಾರಿಯ ಪಿಎ ಹತ್ಯೆ ನಡೆದಿದ್ದು ಹೇಗೆ?
ಹತ್ಯೆ ಮಾಡಿದವರನ್ನು ಬಂಧಿಸಬೇಕು. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಕುಟುಂಬದ ಬೇಡಿಕೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅವರ ಮೇಲೆ 4 ಗುಂಡುಗಳು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ನಾನು ಅವರ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದ್ದಾರೆ.

ಹಲವಾರು ದಿನಗಳ ಕಾಲ ಗಮನಿಸಿ ಸಂಚು ರೂಪಿಸಿ ಈ ದಾಳಿ ನಡೆಸಲಾಗಿದೆ. ಅವರ ಮೇಲೆ ಗುಂಡು ಹಾರಿಸುವ ಮೊದಲು ಕಾರನ್ನು ಹಿಂಬಾಲಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹತ್ತಿರದಿಂದ ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಸಾವನ್ನು ಖಚಿತಪಡಿಸಿಕೊಳ್ಳಲು ಇಷ್ಟು ಹತ್ತಿರದಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದು ಸಾಮಾನ್ಯ ಅಪರಾಧವಲ್ಲ, ಸುಪಾರಿ ಕೊಲೆಗಾರರಿಂದ ನಡೆಸಲಾದ ಯೋಜಿತ ದಾಳಿಯಾಗಿದೆ. ರಥ ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ ಮತ್ತು ರಾಜಕೀಯ ದ್ವೇಷವಿರಲಿಲ್ಲ. ಅವರ ಏಕೈಕ ಗುರುತು ನನ್ನೊಂದಿಗೆ ಕೆಲಸ ಮಾಡಿದ್ದಾರೆ ಎಂಬುದಷ್ಟೇ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಮೃತರ ಕುಟುಂಬವು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೇ ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದೆ.
ಇದರ ನಡುವೆ ತೃಣಮೂಲ ಕಾಂಗ್ರೆಸ್ ಘಟನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು. ಅಲ್ಲದೇ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಸುವೇಂದು ಅಧಿಕಾರಿಯವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ರಥ್ ಅವರು, ಭಾರತೀಯ ವಾಯುಪಡೆಯ ಮಾಜಿ ಸಿಬ್ಬಂದಿಯಾಗಿದ್ದರು. ಇದನ್ನೂ ಓದಿ: ದೀದಿ ಸೋಲಿಸಿದ ಬಿಜೆಪಿ ಅಭ್ಯರ್ಥಿ ಪಿಎಗೆ ಗುಂಡಿಕ್ಕಿ ಹತ್ಯೆ – ʻಕೋಲ್ಡ್ ಬ್ಲಡ್ ಮರ್ಡರ್ʼ ಎಂದ ಸುವೇಂದು ಅಧಿಕಾರಿ

