ಪಾಟ್ನಾ: 20 ವರ್ಷದ ಯುವಕನೊಬ್ಬನನ್ನು 100 ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಂದ ಘಟನೆ ಬಿಹಾರ (Bihar) ದಲ್ಲಿ ನಡೆದಿದೆ.
ಮೃತನನ್ನು ಚಿಂಟು ಎಂದು ಗುರುತಿಸಲಾಗಿದೆ. ಈತ ಶವ ಪೊದೆಯೊಂದರಲ್ಲಿ ಪತ್ತೆಯಾಗಿದೆ. ಚಿಂಟುವಿನ ಮುಖ ಹಾಗೂ ದೇಹದ ಮೇಲೆ ಚಾಕುವಿನಿಂದ ತಿವಿದ ಗುರುತುಗಳಿವೆ.
ಕಳೆದ ಮಂಗಳವಾರದಿಂದ ಚಿಂಟು ಮನೆಯಿಂದ ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಆತನ ಮನೆಯವರು ನಾಪತ್ತೆ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ ಎಲ್ಲಿ ಹುಡುಕಾಟ ನಡೆಸಿದರೂ ಚಿಂಟು ಪತ್ತೆಯಾಗಿರಲಿಲ್ಲ. ಇದೀಗ ಪೊದೆಯೊಂದರಲ್ಲಿ ಆತ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿ ಪೊದೆಗೆ ಬಿಸಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಮ್‍ನಲ್ಲಿ ಮಹಿಳಾ ಶವ ಪತ್ತೆ ಪ್ರಕರಣ- ಮೂವರ ಬಂಧನ
ಕೊಲೆಗೆ ಕಾರಣವೇನು..?: ಹೋಳಿ ಆಚರಣೆ ಸಂದರ್ಭದಲ್ಲಿ ಚಿಂಟು ಹಾಗೂ ನೆರೆಮನೆಯ ರಾಮ ಮಹತೋ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ಆತನೇ ಚಿಂಟುವನ್ನು ಕೊಲೆ ಮಾಡಿದ್ದಾನೆ ಎಮದು ಸಹೋದರ ಗಂಭೀರ ಆರೋಪ ಮಾಡಿದರು. ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ಚಿಂಟುವಿಗೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿದೆ.
ಘಟನೆ ಸಂಬಂಧ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಬದಲಿ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಸದ್ಯ ಮೃತನ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದರು.