ದಾವಣಗೆರೆ: ಪೆಂಟಾ ಚುಚ್ಚುಮದ್ದು ಲಸಿಕೆ ಹಾಕಿಸಿದ ಪರಿಣಾಮ 5 ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ನಗರದ ಅರುಣಾ ಸರ್ಕಲ್ ಬಳಿಯ ಮೈಸೂರ ಕಣ ಎಂಬ ಪ್ರದೇಶದಲ್ಲಿ ನಡೆದಿದೆ.
ಗೀತಮ್ಮ ಹಾಗೂ ಪರಶುರಾಮ ದಂಪತಿಯ 5 ತಿಂಗಳ ಗಂಡು ಮಗು ಮೃತಪಟ್ಟಿದ್ದು, ಶನಿವಾರ ಮಧ್ಯಾಹ್ನ ಪೆಂಟಾ ಲಸಿಕೆ ಹಾಕಿಸಿದ್ದರಿಂದ ಮಗು ಅಸ್ವಸ್ಥಗೊಂಡು ತಡರಾತ್ರಿ ಮೃತಪಟ್ಟಿದೆ.
ಶನಿವಾರ ಮಧ್ಯಾಹ್ನ ಆರೋಗ್ಯ ಇಲಾಖೆ ವತಿಯಿಂದ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಪೆಂಟಾ ಚುಚ್ಚುಮದ್ದು ಲಸಿಕೆ ಕಾರ್ಯಕ್ರಮದಲ್ಲಿ ಮಗುವಿಗೆ ಚುಚ್ಚುಮದ್ದು ಹಾಕಿಸಲಾಗಿದೆ. ಲಸಿಕೆ ಹಾಕಿಸಿದ ನಂತರ ಮಗು ತೀವ್ರವಾಗಿ ಅಸ್ವಸ್ಥಗೊಂಡು ತಡರಾತ್ರಿ ಮೃತಪಟ್ಟಿದೆ.
ಕಟಿಂಗ್ ಶಾಪ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗೆ ಮಗುವಿನ ಸಾವು ಆಕಾಶವೇ ಕಳಚಿ ಬಿದ್ದಂತಾಗಿದೆ. ಚುಚ್ಚು ಮದ್ದು ಹಾಕಿದ್ದೆ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಆರೋಗ್ಯ ಇಲಾಖೆಯ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ದಡಾರ, ನಾಯಿಕೆಮ್ಮು ಹಾಗೂ ಇತರೆ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಆರೋಗ್ಯ ಇಲಾಖೆಯು ಪೆಂಟಾ ಲಸಿಕೆಯನ್ನು ಹಾಕುತ್ತಿದೆ. ಆದರೆ ಈ ಲಸಿಕೆಯ ವಿರುದ್ಧ ಹಲವು ಅನುಮಾನಗಳು ಕಂಡುಬರುತ್ತಿದ್ದು, ಈ ಹಿಂದೆ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಇದೇ ಚುಚ್ಚುಮದ್ದಿನಿಂದ ಮಕ್ಕಳು ಮೃತಪಟ್ಟಿದ್ದರು. ಆದರೆ ಆರೋಗ್ಯ ಇಲಾಖೆಯು ಈ ಆರೋಪವನ್ನು ಅಲ್ಲಗಳೆದಿತ್ತು. ಈ ಮಗುವಿನ ಸಾವು ಕೂಡ ನಿಗೂಢವಾಗಿದ್ದು ತನಿಖೆ ನಂತರ ನಿಖರ ಕಾರಣ ತಿಳಿದುಬರುತ್ತದೆ.
https://www.youtube.com/watch?v=9iNDIBDfY8w