– ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕಾರಕ್ಕೆ ಬೇಕಿದೆ 360 ಮತಗಳು
– ಸದ್ಯ ಎನ್ಡಿಎ ಬಳಿ ಇರುವುದು 354 ಮತಗಳು ಮಾತ್ರ
ನವದೆಹಲಿ: ದೇಶದ ರಾಜಕೀಯದಲ್ಲಿ ಈಗ ಒಂದೇ ಚರ್ಚೆ. ಅದು ‘ಆ 6 ಮತಗಳ’ ಲೆಕ್ಕಾಚಾರ! ಇಡೀ ದೇಶದ ಕಣ್ಣು ಈಗ ಲೋಕಸಭೆಯ(Lok Sabha) ಸಂಖ್ಯಾಬಲದ ಮೇಲಿದೆ. ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕಾರವಾಗುತ್ತದೆಯೇ ಅಥವಾ ಮತ್ತೆ ಮುಗ್ಗರಿಸುತ್ತದೆಯೇ ಎಂಬುದು ಈಗ ತೀವ್ರ ಕುತೂಹಲ ಕೆರಳಿಸಿದೆ.
ಸಂವಿಧಾನ ತಿದ್ದುಪಡಿ ಮಸೂದೆ(Constitution Amendment Bill) ಅಂಗೀಕಾರವಾಗಬೇಕಾದರೆ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3) ಬಹುಮತ ಬೇಕಾಗುತ್ತದೆ. ಹೀಗಾಗಿ ಈ ಮಹತ್ವದ ತಿದ್ದುಪಡಿ ಮಸೂದೆಗಳನ್ನು ಗೆಲ್ಲಿಸಿಕೊಳ್ಳಲು ಎನ್ಡಿಎಗೆ ಬರೋಬ್ಬರಿ 360 ಮತಗಳ ಅನಿವಾರ್ಯತೆಯಿದೆ. ಆದರೆ ಸದ್ಯ ಎನ್ಡಿಎ ಕೈಯಲ್ಲಿರುವುದು 354 ಮತಗಳು ಮಾತ್ರ. ಅಂದರೆ ಗೆಲುವಿನ ದಡ ಸೇರಲು ಎನ್ಡಿಎಗೆ ಇನ್ನೂ ಕೇವಲ 6 ಮತಗಳ ಕೊರತೆಯಿದೆ.
ಈ ‘6 ಮತಗಳ’ ಅಂತರವೇ ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮತದಾನದ ವೇಳೆ ಸದನದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ. ಒಂದು ವೇಳೆ ವಿಪಕ್ಷಗಳ ಕೆಲವು ಸಂಸದರು ಸಭಾತ್ಯಾಗ (Walkout) ಮಾಡಿ ಹೊರನಡೆದರೆ, ಬಹುಮತದ ಮ್ಯಾಜಿಕ್ ನಂಬರ್ ತಂತಾನೇ ಕುಸಿದು ಎನ್ಡಿಎಗೆ ವರದಾನವಾಗಲಿದೆ. ಮತ್ತೊಂದೆಡೆ ತೆರೆಮರೆಯಲ್ಲಿ ನಡೆಯಬಹುದಾದ ಅಡ್ಡಮತದಾನ (Cross voting) ಕೂಡ ಇಡೀ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡುವ ಸಾಧ್ಯತೆಯಿದೆ.
ಈ ಹಿಂದೆ ಏಪ್ರಿಲ್ 17 ರಂದು ಈ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಮೊದಲ ಪ್ರಯತ್ನ ನಡೆಸಿತ್ತು. ಆದರೆ ಅಂದು ಸದನದಲ್ಲಿ ಹಾಜರಿದ್ದ 528 ಸದಸ್ಯರ ಪೈಕಿ ಮಸೂದೆ ಪಾಸಾಗಲು 352 ಮತಗಳ ಅಗತ್ಯವಿತ್ತು. ಎನ್ಡಿಎ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಚಲಾವಣೆಯಾಗಿದ್ದರಿಂದ 54 ಮತಗಳ ಕೊರತೆಯಿಂದಾಗಿ ಮಸೂದೆಗೆ ಹಿನ್ನಡೆಯಾಗಿತ್ತು.
ಈಗ ಸಂಖ್ಯಾ ಬಲ ಎಷ್ಟಿದೆ?
2026ರ ನವೆಂಬರ್ ಅಂತ್ಯದ ವೇಳೆಗೆ ಲೋಕಸಭೆಯಲ್ಲಿ 3 ಸ್ಥಾನಗಳು ಖಾಲಿ(ಬಸಿರ್ಹತ್, ಶ್ರೀನಗರ ಮತ್ತು ಶಿಲ್ಲಾಂಗ್) ಇದ್ದು, ಒಟ್ಟು 540 ಸಂಸದರಿದ್ದಾರೆ. ಎಲ್ಲಾ ಸದಸ್ಯರು ಮತ ಚಲಾಯಿಸಿದರೆ ಮಸೂದೆ ಪಾಸಾಗಲು 360 ಮತಗಳು ಬೇಕಾಗುತ್ತವೆ. ಇದನ್ನೂ ಓದಿ: ಮಸೂದೆ ಬೆಂಬಲಿಸಿದ ಮಾತ್ರಕ್ಕೆ ನಾವು ಬಿಜೆಪಿ ಜೊತೆಗಿದ್ದೇವೆ ಎಂದರ್ಥವಲ್ಲ: ಅಮಿತ್ ಶಾ ಭೇಟಿ ಬಳಿಕ ಕನಿಮೊಳಿ ಹೇಳಿಕೆ
ಇದಲ್ಲದೆ ಎನ್ಡಿಎಯೇತರ ಪಕ್ಷಗಳಾದ ಡಿಎಂಕೆ (22), ಎನ್ಸಿಪಿ (ಎಸ್ಪಿ) (8) ಮತ್ತು ವೈಎಸ್ಆರ್ಸಿಪಿ (4) ಈ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದೆ. ಈ ಮೂರೂ ಪಕ್ಷಗಳು ಬೆಂಬಲ ನೀಡಿದರೂ ಎನ್ಡಿಎ ಬಲ 354ಕ್ಕೆ ತಲುಪುತ್ತದೆ. ಅಂದರೆ ಅಗತ್ಯವಿರುವ 360 ಮತಗಳಿಗಿಂತ 6 ಮತಗಳ ಕೊರತೆ ಉಳಿಯುತ್ತದೆ. ಸ್ಪೀಕರ್ ಕೇವಲ ಸಮಬಲ (ಟೈ) ಆದಾಗ ಮಾತ್ರ ಮತ ಚಲಾಯಿಸುವುದರಿಂದ ಗರಿಷ್ಠ 353 ಮತಗಳು ಮಾತ್ರ ಲಭ್ಯವಾಗಲಿವೆ.
ಗೈರುಹಾಜರಿ ನಿರ್ಣಾಯಕ:
ಸದನಕ್ಕೆ ಹಾಜರಾಗುವ ಸಂಸದರ ಸಂಖ್ಯೆಯೂ ಇಲ್ಲಿ ನಿರ್ಣಾಯಕವಾಗಲಿದೆ. 360 ಮತಗಳ ಲೆಕ್ಕಾಚಾರವು ಎಲ್ಲಾ 540 ಸಂಸದರು ಮತ ಚಲಾಯಿಸಿದರೆ ಮಾತ್ರ ಅನ್ವಯವಾಗುತ್ತದೆ. ಮಸೂದೆ ವಿರೋಧಿಸುವ ಸುಮಾರು 10 ಸಂಸದರು ಮತದಾನದಿಂದ ದೂರ ಉಳಿದರೆ (ಗೈರಾದರೆ), ಮಸೂದೆ ಪಾಸಾಗಲು ಬೇಕಾದ ಮತಗಳ ಸಂಖ್ಯೆ 353ಕ್ಕೆ ಇಳಿಯುತ್ತದೆ. ಆಗ ಎನ್ಡಿಎಗೆ ಮಸೂದೆ ಪಾಸ್ ಮಾಡಿಕೊಳ್ಳುವುದು ಸುಲಭವಾಗಲಿದೆ.
ಅಮಾನತುಗೊಂಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಜೈಲಿನಲ್ಲಿರುವ ಕಾರಣಕ್ಕೆ ಸಂಸದರಾದ ಅಮೃತ್ಪಾಲ್ ಮತ್ತು ಎಂಜಿನಿಯರ್ ರಶೀದ್ ಅವರು ಸದನಕ್ಕೆ ಗೈರಾಗುವ ಸಾಧ್ಯತೆಯಿದೆ
ನಿಲುವು ಅಸ್ಪಷ್ಟ
ಜೆಎಂಎಂ ಪಕ್ಷದ 3 ಹಾಗೂ ಇತರ ಸಣ್ಣ ಪಕ್ಷಗಳು ಮತ್ತು ಪಕ್ಷೇತರ 11 ಸಂಸದರ ನಿಲುವು ಇನ್ನು ಅಸ್ಪಷ್ಟವಾಗಿದೆ. ಈ ಸಂಸದರು ಬೆಂಬಲ ನೀಡಿದರೆ ಸುಲಭವಾಗಿ ಮಸೂದೆ ಪಾಸ್ ಆಗಲಿದೆ.
ವಿರೋಧ 169 ಮತಗಳು
ಕಾಂಗ್ರೆಸ್ ಮತ್ತು ಇತರ ಪ್ರಮುಖ ಪ್ರತಿಪಕ್ಷಗಳು ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವುದನ್ನು ವಿರೋಧಿಸುತ್ತಿವೆ.
– ಕಾಂಗ್ರೆಸ್: ಸುಮಾರು 99 ಸಂಸದರು (ಪ್ರತಿಪಕ್ಷಗಳ ಅತಿ ದೊಡ್ಡ ಪಕ್ಷ).
– ಸಮಾಜವಾದಿ ಪಕ್ಷ (SP): 37 ಸಂಸದರು, ವಿರೋಧಿ ಬಣದಲ್ಲಿದ್ದರೂ ಇವರ ನಡೆ ಅಸ್ಪಷ್ಟವಾಗಿದೆ. ಅಡ್ಡ ಮತದಾನ ಭೀತಿ ಪಕ್ಷಕ್ಕೆ ಕಾಡುತ್ತಿದೆ
– ತೃಣಮೂಲ ಕಾಂಗ್ರೆಸ್ (TMC): ಒಟ್ಟು 29 ಸಂಸದರಲ್ಲಿ 20 ಬಂಡಾಯ ಸಂಸದರು ಎನ್ಡಿಎ (NCPI ಬಣ) ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಉಳಿದ 9 ಸಂಸದರು (ಅಮಾನತುಗೊಂಡಿರುವ ಒಬ್ಬರನ್ನು ಹೊರತುಪಡಿಸಿ 8) ಮಸೂದೆಯನ್ನು ವಿರೋಧಿಸುತ್ತಿದ್ದಾರೆ.
– ಎಡಪಕ್ಷಗಳು (CPI-M, CPI, CPI-ML): ಒಟ್ಟು 8 ಸಂಸದರು.
– ರಾಷ್ಟ್ರೀಯ ಜನತಾ ದಳ (RJD): 4 ಸಂಸದರು. ಮತದಾನದ ಸಮಯದಲ್ಲಿ ಗೈರಾಗಬಹುದು ಅಥವಾ ಸಭಾತ್ಯಾಗ ಮಾಡಬಹುದು ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಇವರ ಅಂತಿಮ ನಡೆ ಕುತೂಹಲ ಮೂಡಿಸಿದೆ.
– ಶಿವಸೇನೆ (UBT): ಒಟ್ಟು 9 ಸಂಸದರಲ್ಲಿ 6 ಮಂದಿ ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದು, ಉಳಿದ 3 ಸಂಸದರು ವಿರೋಧಿ ಬಣದಲ್ಲಿದ್ದಾರೆ.
– ಆಮ್ ಆದ್ಮಿ ಪಕ್ಷ (AAP): 3 ಸಂಸದರು.
– ಇತರ ಸಣ್ಣ ಪಕ್ಷಗಳು (IUML, NC, VCK, RSP, MDMK, KEC, AIMIM, ASP ಇತ್ಯಾದಿ): 11
6 ಮತಗಳ ಕೊರತೆ:
ಏಪ್ರಿಲ್ನಲ್ಲಿ ಲೋಕಸಭೆಯಲ್ಲಿದ್ದ 54 ಮತಗಳ ಕೊರತೆಯು ಈಗ ಕೇವಲ 6 ಮತಗಳಿಗೆ ಇಳಿದಿದೆ. ಹೀಗಾಗಿ 6 ಮತಗಳನ್ನು ಹೇಗೆ ತುಂಬುತ್ತದೆ? ಅಥವಾ ಸಂಸದರ ಗೈರಿನಿಂದಾಗಿ ಬಹುಮತಕ್ಕೆ ಬೇಕಾಗಿರುವ ಮತಗಳ ಸಂಖ್ಯೆ ಕಡಿಮೆಯಾಗುವ ಮೂಲಕ ಮಸೂದೆ ಪಾಸ್ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪ್ರಜಾಪ್ರಭುತ್ವಕ್ಕೆ ಅಪಾಯ; ಮೋದಿ ಅಧಿಕಾರದ ಸಂಪೂರ್ಣ ನಿಯಂತ್ರಣ ಬಯಸುತ್ತಿದ್ದಾರೆ: ಖರ್ಗೆ ವಾಗ್ದಾಳಿ
ರಾಜ್ಯಸಭೆಯ ಚಿತ್ರಣ ಹೇಗಿದೆ?
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದ್ದು, ಒಟ್ಟು 244 ಸದಸ್ಯರಿದ್ದಾರೆ. ಇಲ್ಲಿ ಮಸೂದೆ ಅಂಗೀಕಾರವಾಗಲು ಮೂರನೇ ಎರಡರಷ್ಟು ಅಂದರೆ 163 ಮತಗಳು ಬೇಕು. ಸದ್ಯ ಎನ್ಡಿಎ ಬಳಿ 154 ಸಂಸದರಿದ್ದು, 9 ಮತಗಳ ಕೊರತೆಯಿದೆ. ಬಿಜೆಡಿ (5) ಮತ್ತು ವೈಎಸ್ಆರ್ಸಿಪಿ (4) ಬೆಂಬಲ ನೀಡಿದರೆ ಎನ್ಡಿಎ ಬಲ ಸರಿಯಾಗಿ 163ಕ್ಕೆ ತಲುಪುತ್ತದೆ. ಡಿಎಂಕೆ (8) ಮತ್ತು ಎನ್ಸಿಪಿ (ಎಸ್ಪಿ) (1) ಕೂಡ ಬೆಂಬಲಿಸಿದರೆ ಈ ಸಂಖ್ಯೆ 172ಕ್ಕೆ ಏರಿಕೆಯಾಗಿ ಮಸೂದೆ ಸುಲಭವಾಗಿ ಪಾಸಾಗಲಿದೆ.
3 ಸ್ಥಾನಗಳು ಖಾಲಿ ಯಾಕೆ?
ಶ್ರೀನಗರ:
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಸದರಾಗಿದ್ದ ಆಗಾ ಸೈಯದ್ ರುಹುಲ್ಲಾ ಮೆಹದಿ ಅವರು ತಮ್ಮ ಸಂಸದ ಸ್ಥಾನಕ್ಕೆ ಈ ವರ್ಷದ ನವೆಂಬರ್ನಲ್ಲಿ ರಾಜೀನಾಮೆ ನೀಡಿದ್ದಾರೆ. 370ನೇ ವಿಧಿಯ ಮರುಸ್ಥಾಪನೆ, ಮೀಸಲಾತಿ ನೀತಿ ಹಾಗೂ ರಾಜಕೀಯ ಕೈದಿಗಳ ಬಿಡುಗಡೆಯಂತಹ ಪ್ರಮುಖ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಪಕ್ಷವು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ರಾಜೀನಾಮೆ ಸಲ್ಲಿಸಿದ್ದು ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದ್ದಾರೆ.
ಬಸಿರ್ಹತ್:
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಸಂಸದರಾಗಿದ್ದ ಹಾಜಿ ಶೇಖ್ ನೂರುಲ್ ಇಸ್ಲಾಂ ಅವರು 2024ರ ಸೆಪ್ಟೆಂಬರ್ನಲ್ಲಿ ನಿಧನದ ಕಾರಣ ಬಸಿರ್ಹತ್ ಲೋಕಸಭಾ ಕ್ಷೇತ್ರವು ಖಾಲಿಯಾಗಿದೆ. ಸಾಮಾನ್ಯವಾಗಿ ಸಂಸದರ ನಿಧನದ ನಂತರ ಆರು ತಿಂಗಳ ಒಳಗಾಗಿ ಉಪಚುನಾವಣೆ ನಡೆಯಬೇಕು. ಆದರೆ 2024ರ ಚುನಾವಣೆಯಲ್ಲಿ ಹಾಜಿ ನೂರುಲ್ ಇಸ್ಲಾಂ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಚುನಾವಣಾ ಅರ್ಜಿಯು ಕಲ್ಕತ್ತಾ ಹೈಕೋರ್ಟ್ನಲ್ಲಿ ಇನ್ನೂ ಬಾಕಿ ಇರುವ ಕಾರಣ ಚುನಾವಣಾ ಆಯೋಗವು ಈ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಘೋಷಿಸಿಲ್ಲ
ಶಿಲ್ಲಾಂಗ್:
ಮೇಘಾಲಯದ ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ (VPP) ಸಂಸದರಾಗಿದ್ದ ಡಾ. ರಿಕಿ ಆಂಡ್ರ್ಯೂ ಜೆ. ಸಿಂಗ್ಕಾನ್ ಈ ಫೆಬ್ರವರಿಯಲ್ಲಿ ನಿಧನರಾಗಿದ್ದಾರೆ. ನಿಯಮದಂತೆ ಆರು ತಿಂಗಳ ಒಳಗಾಗಿ ಅಂದರೆ ಆಗಸ್ಟ್ ಒಳಗೆ ಉಪಚುನಾವಣೆ ನಡೆಯಬೇಕಿತ್ತು. ಆದರೆ, ಮೇಘಾಲಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (Special Intensive Revision – SIR) ನಡೆಯುತ್ತಿದ್ದ ಕಾರಣ ಚುನಾವಣಾ ಆಯೋಗವು ಚುನಾವಣೆಯನ್ನು ಮುಂದೂಡಿತ್ತು.

