– ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ; ಸಂಪೂರ್ಣ ಜವಾಬ್ದಾರಿ ಹೊಣೆ ಸರಿಯಲ್ಲ
ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ (Delimitation Bill) ಮೂಲಕ ರಾಜಕೀಯ ಅಧಿಕಾರವನ್ನು ಕೇಂದ್ರೀಕರಿಸಲು ಮೋದಿ ಸರ್ಕಾರ ಬಯಸುತ್ತಿದೆ. ಈ ಮಸೂದೆ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಉಂಟುಮಾಡುತ್ತವೆ. ಆದ್ದರಿಂದ ಇಂಡಿ ಒಕ್ಕೂಟದ ನಾಯಕರು ಸಾಂವಿಧಾನಿಕ ತಿದ್ದುಪಡಿಯನ್ನ ವಿರೋಧಿಸಲು ಸಾಮೂಹಿಕವಾಗಿ ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದ್ದಾರೆ.
ಉದ್ದೇಶಿತ ಡಿಲಿಮಿಟೇಶನ್ ಮಸೂದೆ ಜಾರಿಗೆ ತರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
LIVE: Press Briefing | INDIA Party Leaders | New Delhi https://t.co/6tv9ki934i
— Congress (@INCIndia) November 28, 2026
ಲೋಕಸಭೆಯ ಸದಸ್ಯ ಬಲವನ್ನ 850 ಸ್ಥಾನಗಳಿಗೆ ಹೆಚ್ಚಿಸುವ ಸರ್ಕಾರದ (Government) ಯೋಜನೆಯು ನ್ಯಾಯಯುತ ಪ್ರಾತಿನಿಧ್ಯದ ಅಗತ್ಯಕ್ಕಿಂತ ಹೆಚ್ಚಾಗಿ ರಾಜಕೀಯ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಈ ಹಿಂದೆ ʻ400 ಪಾರ್ʼ ಹೇಳಿಕೆ ನೀಡಿದ್ದ ಆಡಳಿತ ಬಿಜೆಪಿಯು ದೀರ್ಘಾವಧಿಗೆ ಅಧಿಕಾರ ಪಡೆಯಲು ಈಗ ‘800 ಪಾರ್’ ಗುರಿಯನ್ನು ಹೊಂದಿದ್ದಾರೆ. ಲೋಕಸಭೆ ಸ್ಥಾನಗಳನ್ನ 850 ಕ್ಕೆ ಹೆಚ್ಚಿಸುವ ಮೂಲಕ ಅಧಿಕಾರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹಾಗೂ ಅನಿರ್ದಿಷ್ಠಾವಧಿವರೆಗೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನರೇಂದ್ರ ಮೋದಿ ಅಧಿಕಾರದ ಸಂಪೂರ್ಣ ನಿಯಂತ್ರಣವನ್ನ ಬಯಸುತ್ತಿದ್ದಾರೆ ಎಂದು ಕಿಡಿ ಕಾರಿದ್ರು.
ಎಸ್ಸಿ-ಎಸ್ಟಿ ಹಿತಾಸಕ್ತಿ ಕಡೆಗಣನೆ
ಮುಂದುವರಿದು ಮಾತನಾಡಿದ ಅವರು, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಹಿತಾಸಕ್ತಿಯನ್ನ ಕಡೆಗಣಿಸಲಾಗಿದೆ. ಈ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಲೋಕಸಭಾ ಸ್ಥಾನಗಳಲ್ಲಿ ಅನುಗುಣವಾದ ಹೆಚ್ಚಳವನ್ನ ಖಚಿತಪಡಿಸಿಕೊಳ್ಳಲು ಸಂವಿಧಾನದ ತಿದ್ದುಪಡಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಪ್ರತಿ ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿಗಳಿಗೆ ಮೀಸಲಾದ ಸ್ಥಾನಗಳ ಸಂಖ್ಯೆ ಆಯಾ ಜನಸಂಖ್ಯೆಯ ಪಾಲನ್ನು ಪ್ರತಿಬಿಂಬಿಸಬೇಕು. ಲೋಕಸಭೆಯ ವಿಸ್ತರಣೆಯು ಮೀಸಲು ಕ್ಷೇತ್ರಗಳ ಹೆಚ್ಚಳಕ್ಕೆ ಕಾರಣವಾಗಬಹುದಾದ್ರೂ, ಸರ್ಕಾರದ ಪ್ರಸ್ತಾವನೆಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲ ಎಂದರು.
ಮುಂಬರುವ 2026ರ ಜನಗಣತಿಯನ್ನು ಕ್ಷೇತ್ರ ಪುನರ್ವಿಂಗಡಣೆ (delimitation) ಪ್ರಕ್ರಿಯೆಯಲ್ಲಿ ಹೇಗೆ ಪರಿಗಣಿಸಲಾಗುವುದು ಎಂಬುದರ ಕುರಿತು ಕೇಂದ್ರ ಸರ್ಕಾರ ಏಕೆ ಸ್ಪಷ್ಟನೆ ನೀಡಿಲ್ಲ? ಎಂದು ಮತ್ತಷ್ಟು ಪ್ರಶ್ನಿಸಿದರು. ಖರ್ಗೆ ಅವರ ಪ್ರಕಾರ, ಇತ್ತೀಚಿನ ಜನಸಂಖ್ಯಾ ಅಂಕಿ-ಅಂಶಗಳನ್ನು ಬಳಸುವುದರಿಂದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳಿಗೆ (ST) ಮೀಸಲಾದ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು. ಇತ್ತೀಚಿನ ಜನಗಣತಿಯ ದತ್ತಾಂಶ ಆಧರಿಸಿ ಸ್ಥಾನಗಳನ್ನು ಹಂಚಿಕೆ ಮಾಡಿದರೆ, ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ/ಎಸ್ಟಿ ಸಮುದಾಯಗಳು ಸಹಜವಾಗಿಯೇ ಹೆಚ್ಚಿನ ಸ್ಥಾನಗಳಿಗೆ ಅರ್ಹವಾಗುತ್ತವೆ. ಆದರೆ, ಅವರ ತಿದ್ದುಪಡಿಯ ನಿಯಮಗಳನ್ನು ಗಮನಿಸಿದರೆ, ಎಸ್ಸಿ/ಎಸ್ಟಿ ಸಮುದಾಯಗಳಿಗೆ ನ್ಯಾಯಯುತ ಪಾಲನ್ನು ನಿರಾಕರಿಸಿ, ತಮ್ಮ ತಕ್ಷಣದ ಹಿತಾಸಕ್ತಿಗಳಿಗೆ ಪೂರಕವಾದ ಕಾರ್ಯಸೂಚಿಯನ್ನು ಜಾರಿಗೆ ತರಲು ಅವರು ಉದ್ದೇಶಿಸಿರುವಂತೆ ತೋರುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ರು.
ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ
ಇನ್ನೂ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಚುನಾವಣಾ ಆಯೋಗಕ್ಕೆ ವಹಿಸಿರುವುದಕ್ಕೂ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ 10 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಿರುವ ವಿಚಾರದಲ್ಲಿ ಚುನಾವಣಾ ಆಯೋಗವು ಈಗಾಗಲೇ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು. ಈ ವ್ಯವಸ್ಥೆಯು ಒಪ್ಪುವಂತಹದ್ದಲ್ಲ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷರು, ಪ್ರಸ್ತುತ ಚುನಾವಣಾ ಆಯೋಗದ ನೇತೃತ್ವದಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಸಿದರೆ ಕ್ಷೇತ್ರಗಳ ಗಡಿಗಳು ಮತ್ತು ಮೀಸಲಾತಿ ವರ್ಗಗಳಲ್ಲಿ ಹಸ್ತಕ್ಷೇಪ ಅಥವಾ ತಿರುಚುವಿಕೆ ನಡೆಯಬಹುದು ಎಂದು ದೂರಿದರು.
ಜ್ಞಾನೇಶ್ ಕುಮಾರ್ ಅವರನ್ನು ನೋಡಿ, ಅವರು ಈಗಾಗಲೇ ಆರೋಪಿಯ ಸ್ಥಾನದಲ್ಲಿ ನಿಂತಿದ್ದಾರೆ. ಅವರ ನೇತೃತ್ವದಲ್ಲಿ ಇಡೀ ಪ್ರಕ್ರಿಯೆ ನಡೆದರೆ, ಅದು ಅನಿವಾರ್ಯವಾಗಿ ಅಕ್ರಮಗಳಿಂದ ಕೂಡಿರುತ್ತದೆ. ಅವರು ತಮ್ಮ ಇಚ್ಛೆಗೆ ತಕ್ಕಂತೆ ಯಾವುದೇ ಕ್ಷೇತ್ರವನ್ನು ‘ಸಾಮಾನ್ಯ’ ಅಥವಾ ‘ಮೀಸಲು’ ಎಂದು ಬದಲಾಯಿಸಬಹುದು. ಮತಗಳ್ಳತನ ಕೃತ್ಯಕ್ಕೆ ಅನುಕೂಲ ಮಾಡಿಕೊಡಲು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯಿಂದಲೇ ಸೂಚನೆಗಳನ್ನು ನೀಡಲು ಸಾಧ್ಯವಾಗುವುದಾದರೆ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನೂ ದುರುಪಯೋಗಪಡಿಸಿಕೊಳ್ಳಬಹುದು ಎಂದು ಪ್ರತಿಪಾದಿಸಿದರು.

