ಬೆಂಗಳೂರು: ಹೋರಾಟ ನಿರತ ಆಶಾ ಕಾರ್ಯಕರ್ತೆಯರ (Asha Workers Protest) ನಿಯೋಗದ ಜೊತೆ ಆರೋಗ್ಯ ಸಚಿವ ಯು.ಟಿ. ಖಾದರ್ (UT Khader) ಸಭೆ ನಡೆಸಿದ್ದಾರೆ. ಈ ವೇಳೆ ಸಿಎಂ ಡಿ.ಕೆ ಶಿವಕುಮಾರ್ (CM D.K Shivakumar) ಕಳುಹಿಸಿದ 2,000 ರೂ. ಹೆಚ್ಚಳದ ಭರವಸೆಯ ಸಂದೇಶವನ್ನು ಆಶಾ ಕಾರ್ಯಕರ್ತರ ಮುಂದೆ ಬಹಿರಂಗಪಡಿಸಿದ್ದಾರೆ. ಆದರೆ ಈ ಭರವಸೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲ.
ನೂತನ ಸರ್ಕಾರಿ ನಿವಾಸದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಯು.ಟಿ ಖಾದರ್ ಚರ್ಚೆ ನಡೆಸಿದರು. ಬಳಿಕ 20 ಜನರ ಆಶಾ ಕಾರ್ಯಕರ್ತೆಯರ ನಿಯೋಗದ ಜೊತೆ ಸಭೆ ನಡೆಸಿದರು. ಈ ವೇಳೆ ಆಶಾ ಕಾರ್ಯಕರ್ತೆಯರ ಅಹವಾಲನ್ನು ಸಚಿವರು ಆಲಿಸಿದರು. ಇದನ್ನೂ ಓದಿ: 12ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ – ಮನವೊಲಿಕೆಗೆ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಮುಂದಾದ ಯುಟಿ ಖಾದರ್
ಬಳಿಕ ನಮ್ಮ ಸರ್ಕಾರವನ್ನು ನಂಬಿ, ಪ್ರತಿಭಟನೆ ನಿಲ್ಲಿಸಿ ಎಂದುಸಚಿವರು ಮನವಿ ಮಾಡಿದರು. ಈ ವೇಳೆ ಗೌರವಧನ ಎಷ್ಟು ಹೆಚ್ಚಳ ಮಾಡುತ್ತೀರಿ? ಒಂದು ಸಂಖ್ಯೆ ಹೇಳಿ ಎಂದು ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದರು. ಇದಕ್ಕೆ ಚರ್ಚೆ ಮಾಡೋಣ, ಅಧಿವೇಶನ ಮುಗಿಯಲಿ ಎಂದು ಸಚಿವರು ತಿಳಿಸಿದರು.
ಸಿಎಂ ಡಿ.ಕೆ ಶಿವಕುಮಾರ್ ಅವರು ಕರೆ ಮಾಡಿ ಮಾತನಾಡಿದ ಬಳಿಕ, 1,000 – 1,500 ಎಂದು ಸಚಿವರು ತಿಳಿಸಿದರು. ಇದಕ್ಕೆ ಆಶಾ ಕಾರ್ಯಕರ್ತೆಯರು ಒಪ್ಪಿಲ್ಲ.
ಸಿಎಂ ಜೊತೆಗೆ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿಯವರು ಫೋನ್ ಕರೆಯಲ್ಲಿ ಚರ್ಚಿಸಿದರು. ಈ ವೇಳೆ, ಸಿಎಂ 2,000 ರೂ. ಹೆಚ್ಚಳದ ಭರವಸೆ ನೀಡಿದರು. ಈ ಭರವಸೆಯನ್ನೂ ಆಶಾ ಕಾರ್ಯಕರ್ತೆಯರು ಒಪ್ಪಲಿಲ್ಲ.
ಕಳೆದ ಬಾರಿ 2,000 ರೂ. ಎಂದು ಮಾಡಿಲ್ಲ. ಈಗ ಮತ್ತೆ ಅದೇ ಭರವಸೆ ಬೇಡ. ತಮ್ಮ15 ಸಾವಿರ ರೂ. ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು. ಸದ್ಯ ರಾಜ್ಯದಿಂದ ಈಗ 6,000 ರೂ. ಕೇಂದ್ರದಿಂದ 2,000 ರೂ. ಗೌರವಧನ ಸಿಗುತ್ತಿದೆ. 2,000 ಹೆಚ್ಚಿಸಿದರೆ 10,000 ರೂ. ಆಗಲಿದೆ.
ಬಳಿಕ ಮಾತನಾಡಿದ ಯು.ಟಿ ಖಾದರ್, ನಮ್ಮ ಇಲಾಖೆಯಲ್ಲಿ ಕೆಲಸ ಮಾಡುವ ಸೋದರಿಯರು 12 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ, ನಾವು ಎಲ್ಲಾ ಸಹಕಾರ ಕೊಡುತ್ತೇವೆ ಎಂದು ಹೇಳಿದ್ದೇವೆ. ಸಿಎಂ ಕನಕಪುರದಲ್ಲಿ ಇದ್ದಾರೆ. ಇಂದು (ನ.28) ಮಧ್ಯಾಹ್ನ 3:30ಕ್ಕೆ ಕೃಷ್ಣದಲ್ಲಿ ಮತ್ತೆ ಸಭೆ ನಡೆಯಲಿದ್ದು, ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರಲ್ಲಿ 1,000 ರೂ. ಸೇರಿಸಲು ಕೇಳಿದ್ದಾರೆ. ಒಟ್ಟು 3,000 ರೂ.ಗೆ ಆಶಾ ಕಾರ್ಯಕರ್ತೆಯರು ಒತ್ತಾಯಿಸುತ್ತಿದ್ದಾರೆ. 2,000 ರೂ.ಗೆ ಸರ್ಕಾರ ಒಪ್ಪಿದೆ. 2,000 ರೂ. ಕೊಟ್ಟರೇ ವರ್ಷಕ್ಕೆ 100 ಕೋಟಿ ರೂ. ಆಗಬಹುದು. ಈ ಬಗ್ಗೆ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಲವರು ರಾಜಕೀಯ ಮಾಡ್ತಿದ್ದಾರೆ, ಲಿಖಿತ ಭರವಸೆ ಕೊಡಲು ಸಾಧ್ಯವಿಲ್ಲ – ಸಿಎಂ ಡಿಕೆಶಿ ಖಡಕ್ ಹೇಳಿಕೆ
