– ದೇವಸ್ಥಾನದ ಹಾಲಿ ಟ್ರಸ್ಟಿಗಳ ಮಂಡಳಿಯೇ ಅಮಾನತು
– 50 ಮೀಟರ್ ದೂರದಲ್ಲಿ ಪ್ರತಿಯೊಬ್ಬ ಭಕ್ತರು ದೀಪ ಹಚ್ಚಬಹುದು
– ಸಿಆರ್ಪಿಎಫ್ ಹೆಗಲಿಗೆ ಭದ್ರತೆಯ ಹೊಣೆ
ನವದೆಹಲಿ: ಮಧುರೈನ ತಿರುಪ್ಪರಂಕುಂದ್ರಂ(Thiruparankundram) ಬೆಟ್ಟದ ವಿವಾದಿತ ಕಲ್ಲಿನ ಸ್ತಂಭದಲ್ಲಿ ನಾಳೆಯೇ ಕಾರ್ತಿಕ ದೀಪ ಬೆಳಗುವಂತೆ ಸುಪ್ರೀಂ ಕೋರ್ಟ್(Supreme Court) ಐತಿಹಾಸಿಕ ಆದೇಶ ಪ್ರಕಟಿಸಿದೆ.
ನವೆಂಬರ್ 20ರಂದು ನೀಡಿದ್ದ ಆದೇಶವನ್ನು ಪಾಲಿಸಲು ವಿಫಲವಾದ ತಮಿಳುನಾಡು(Tamil Nadu) ಸರ್ಕಾರ ಮತ್ತು ಮಧುರೈ ಜಿಲ್ಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾ. ಅರವಿಂದ್ ಕುಮಾರ್ ಮತ್ತು ವಿಪುಲ್ ಪಾಂಚೋಲಿ ಅವರಿದ್ದ ಪೀಠವು, ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಹಾಲಿ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿದೆ.
ದೇವಸ್ಥಾನದ ಟ್ರಸ್ಟ್ನ ಆಡಳಿತ ನಿರ್ವಹಣೆಗಾಗಿ ನಿವೃತ್ತ ನ್ಯಾಯಮೂರ್ತಿಗಳಾದ ವೈದ್ಯನಾಥನ್ ಮತ್ತು ಪಾರ್ಥಿಬನ್ ಅವರನ್ನು ರಿಸೀವರ್ಗಳಾಗಿ (ಆಡಳಿತಾಧಿಕಾರಿಗಳಾಗಿ) ನೇಮಿಸಿದ ನ್ಯಾಯಾಲಯ, ನಾಳೆ ಅಂದರೆ ನವೆಂಬರ್ 28ರಂದು ದೀಪತ್ತೂನ್ನಲ್ಲಿ ಕಾರ್ತಿಕ ದೀಪವನ್ನು ಹಚ್ಚುವಂತೆ ನಿರ್ದೇಶಿಸಿದೆ. ದೀಪ ಬೆಳಗಿಸುವ ಜವಾಬ್ದಾರಿಯನ್ನು ಈ ಇಬ್ಬರು ರಿಸೀವರ್ಗಳಿಗೆ ವಹಿಸಲಾಗಿದೆ.
ನವೆಂಬರ್ 20ರ ಆದೇಶದಲ್ಲಿ ಸಣ್ಣ ತಂಡಕ್ಕೆ ಮಾತ್ರ ದೀಪ ಹಚ್ಚಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ವಿವಾದಿತ ಸ್ಥಳದ ಸಮೀಪವಿರುವ ದರ್ಗಾದಿಂದ ಎಲ್ಲಾ ದಿಕ್ಕುಗಳಲ್ಲಿಯೂ ಕನಿಷ್ಠ 50 ಮೀಟರ್ ದೂರದಲ್ಲಿ ಪ್ರತಿಯೊಬ್ಬ ಭಕ್ತರೂ ದೀಪ ಹಚ್ಚಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದರ್ಗಾಕ್ಕೆ ರಕ್ಷಣೆ ನೀಡಲು ಮತ್ತು ಅಲ್ಲಿಗೆ ಭೇಟಿ ನೀಡುವ ಭಕ್ತರು ಪ್ರಾರ್ಥನೆ ಸಲ್ಲಿಸಲು ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (CRPF) ಸೂಚಿಸಲಾಗಿದೆ.
ತಮಿಳುನಾಡು ಮುಖ್ಯ ಕಾರ್ಯದರ್ಶಿ, ಡಿಜಿಪಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರು, ಮಧುರೈ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಎಸ್ಪಿ ಮತ್ತು ದೇವಸ್ಥಾನದ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ತಿರುಪ್ಪರಂಕುಂದ್ರಂ ದೀಪೋತ್ಸವ ವಿವಾದ: ಸುಪ್ರೀಂನಲ್ಲಿ ಕ್ಷಮೆಯಾಚಿಸಿದ ಮಧುರೈ ಜಿಲ್ಲಾಧಿಕಾರಿ
ಈ ಪ್ರಕರಣದಲ್ಲಿ ನಡೆದ ಘಟನೆಗಳನ್ನು ಗಮನಿಸಿದರೆ, ಕಾರ್ಯಾಂಗದ ಅಧಿಕಾರಿಗಳು ತಮ್ಮ ರಾಜಕೀಯ ನಾಯಕರ ಅಣತಿಯಂತೆ ನಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದೇಶ ಪಾಲಿಸದಿರುವುದು ತಮಿಳುನಾಡು ಆಡಳಿತದಲ್ಲಿ ಅಥವಾ ಕನಿಷ್ಠ ಮಧುರೈ ಜಿಲ್ಲೆಯಲ್ಲಿ ಆಡಳಿತಾತ್ಮಕ ಅರಾಜಕತೆ ಇರುವುದನ್ನು ತೋರಿಸುತ್ತದೆ. ಇಂತಹ ಪರಿಸ್ಥಿತಿಯನ್ನು ಉಕ್ಕಿನ ಹಸ್ತದಿಂದ ಹತ್ತಿಕ್ಕುವ ಸಮಯ ಬಂದಿದೆ, ಇಲ್ಲದಿದ್ದರೆ ಸಂವಿಧಾನಿಕ ಅರಾಜಕತೆ ಉಂಟಾಗುತ್ತದೆ ಎಂದು ಪೀಠ ಎಚ್ಚರಿಸಿದೆ. ಇದನ್ನೂ ಓದಿ: ಸುಪ್ರೀಂ ಹೇಳಿದ ಸ್ಥಳದಲ್ಲಿ ಬೆಳಗಲಿಲ್ಲ ಕಾರ್ತಿಕ ದೀಪ – ಕೋರ್ಟ್ ಆದೇಶ ಧಿಕ್ಕರಿಸಿದ ವಿಜಯ್
ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕೇ ಬೇಡವೇ ಎಂದು ನಿರ್ಧರಿಸುವ ಅಧಿಕಾರವನ್ನು ಅಧಿಕಾರಿಗಳು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ. ಸುಪ್ರೀಂ ಕೋರ್ಟ್ ಆದೇಶವು ಯಾವುದೇ ಸಂಧಾನಕ್ಕೆ ಆಹ್ವಾನವಲ್ಲ. ನ್ಯಾಯಾಲಯವೇ ಅದನ್ನು ಮಾರ್ಪಡಿಸುವವರೆಗೂ ಸರ್ಕಾರ, ಅಧಿಕಾರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಅದಕ್ಕೆ ಬದ್ಧವಾಗಿರಬೇಕು. ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ನ್ಯಾಯದ ಹಾದಿಯನ್ನು ಕಲುಷಿತಗೊಳಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ನ್ಯಾಯಪೀಠ ಖಡಕ್ ಸಂದೇಶ ರವಾನಿಸಿದೆ.
