– ಶೇ. 50 ಸ್ಥಾನ ಹೆಚ್ಚಳಕ್ಕೆ ಅಸ್ತು
– 2051 ರವರೆಗೆ ಕ್ಷೇತ್ರ ಹಂಚಿಕೆ ತಡೆ ವಿಸ್ತರಣೆ
– 1971ರ ಜನಗಣತಿ ಅನುಪಾತವೇ ಅಂತಿಮ!
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ (Women’s Reservation Bill) ಸಂಬಂಧಿಸಿದ ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ (Delimitation Bill) ಪ್ರಮುಖ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಇದರ ಅನ್ವಯ, ದೇಶಾದ್ಯಂತ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಏಕರೂಪವಾಗಿ ಶೇ. 50 ರಷ್ಟು ಹೆಚ್ಚಿಸಲು ಮತ್ತು 1971 ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣವನ್ನು ನಿರ್ಧರಿಸುವ ವ್ಯವಸ್ಥೆಯ ಮೇಲಿನ ತಡೆಯನ್ನು (Freeze) ಇನ್ನೂ 25 ವರ್ಷಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ.
ಈ ಹೊಸ ತಿದ್ದುಪಡಿಯ ಪ್ರಕಾರ, ರಾಜ್ಯವಾರು ಸ್ಥಾನಗಳ ಹಂಚಿಕೆಯ ಯಥಾಸ್ಥಿತಿಯು 2051 ರವರೆಗೆ ಮುಂದುವರಿಯಲಿದೆ. ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆಯಿಂದ ರಾಜ್ಯಗಳ ನಡುವಿನ ರಾಜಕೀಯ ಸಮತೋಲನಕ್ಕೆ ಧಕ್ಕೆಯಾಗಬಹುದು ಎಂಬ ಆತಂಕವನ್ನು ದೂರ ಮಾಡಲು ಕೇಂದ್ರ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ನವೆಂಬರ್ 30 ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಈ ನಿರ್ಧಾರ ಹೊರಬಿದ್ದಿದ್ದು, ಅಧಿವೇಶನದಲ್ಲಿ ಸರ್ಕಾರವು ಈ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪರಿಷ್ಕೃತ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.
ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಹೊಸ ಜನಗಣತಿಯ ಆಧಾರದ ಮೇಲೆ ಸ್ಥಾನ ಹಂಚಿಕೆ ಮಾಡಿದರೆ ಅನ್ಯಾಯವಾಗುತ್ತದೆ ಎಂಬ ಕೂಗು ಕೇಳಿಬಂದಿತ್ತು. ಈಗ 1971 ರ ಜನಗಣತಿಯ ಅನುಪಾತವನ್ನೇ 2051 ರವರೆಗೆ ಉಳಿಸಿಕೊಳ್ಳುವುದರಿಂದ, ಯಾವುದೇ ರಾಜ್ಯದ ಪ್ರಾತಿನಿಧ್ಯದ ಪ್ರಮಾಣ ಕಡಿಮೆಯಾಗುವುದಿಲ್ಲ.
ಮಸೂದೆಗೆ ಬೆಂಬಲ ನೀಡಲು ಡಿಎಂಕೆ (DMK) ಸೇರಿದಂತೆ ಕೆಲವು ಪ್ರಾದೇಶಿಕ ಪಕ್ಷಗಳು ಶೇ. 50 ರಷ್ಟು ಸ್ಥಾನ ಹೆಚ್ಚಳ ಮತ್ತು 25 ವರ್ಷಗಳ ಕಾಲ ತಡೆ ವಿಸ್ತರಣೆ ಮಾಡಬೇಕೆಂದು ಷರತ್ತು ಮುಂದಿಟ್ಟಿದ್ದವು. ಈ ಷರತ್ತನ್ನು ಕೇಂದ್ರ ಸರ್ಕಾರ ಈಗ ಅಧಿಕೃತವಾಗಿ ಅಂಗೀಕರಿಸಿದಂತಾಗಿದೆ. ಇದರಿಂದ ಡಿಎಂಕೆ, ಬಿಆರ್ಎಸ್ (BRS) ಮತ್ತು ಎನ್ಸಿಪಿ (NCP) ಪಕ್ಷಗಳು ಮಸೂದೆಯನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ಏಪ್ರಿಲ್ನಲ್ಲಿ ನಡೆದ ಮತದಾನದಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗದೆ ಈ ಮಸೂದೆ ಸೋಲು ಕಂಡಿತ್ತು. ಈಗ ನವೆಂಬರ್ 30 ರಂದು ಲೋಕಸಭೆ ಮತ್ತು ಡಿಸೆಂಬರ್ 2 ರಂದು ರಾಜ್ಯಸಭೆಯ ವಿಶೇಷ ಕಲಾಪ ನಡೆಯಲಿದ್ದು, ಅಲ್ಲಿ ಈ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಸಜ್ಜಾಗಿದೆ.
ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆದರೆ ದಕ್ಷಿಣ ರಾಜ್ಯಗಳಿಗೆ ಲೋಕಸಭೆಯಲ್ಲಿ ಸಂಖ್ಯೆಯೇ ಇರುವುದಿಲ್ಲ. ಈ ಕಾರಣಕ್ಕೆ ನಾವು ಯಾವುದೇ ಕಾರಣಕ್ಕೆ ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದು ದಕ್ಷಿಣದ ರಾಜ್ಯಗಳು ಪಟ್ಟು ಹಿಡಿದಿದ್ದವು.
