– ಭಾರತ ಪರ 2 ವಿಕೆಟ್ ಕಿತ್ತ ಆಕಾಶ್ ದೀಪ್
ಕ್ರೈಸ್ಟ್ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಉಭಯ ತಂಡಗಳು ಬಲಾಬಲ ಪ್ರದರ್ಶಿಸಿವೆ. ಟೀಂ ಇಡಿಯಾ ಬೌಲರ್ಗಳು 5 ವಿಕೆಟ್ ಕಿತ್ತರೆ, ಕಿವೀಸ್ ಬ್ಯಾಟರ್ಗಳು ಮೊದಲ ದಿನ 5 ವಿಕೆಟ್ ಕಳೆದುಕೊಂಡರೂ 246 ರನ್ಗಳ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರೈಸ್ಟ್ ಚರ್ಚ್ನ ಹಗ್ಲೇಯ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಕಿವೀಸ್ 5 ವಿಕೆಟ್ ನಷ್ಟಕ್ಕೆ 85 ಓವರ್ಗಳಲ್ಲಿ 246 ರನ್ ಗಳಿಸಿದೆ. ಸದ್ಯ 53 ರನ್ ಗಳಿಸಿರೋ ಟಾಮ್ ಬ್ಲಂಡೆಲ್, 36 ರನ್ ಗಳಿಸಿರೋ ಗ್ಲೆನ್ ಫಿಲಿಪ್ಸ್ ಕ್ರೀಸ್ನಲ್ಲಿದ್ದು, ಶನಿವಾರ 2ನೇ ದಿನದಾಟ ಆರಂಭಿಸಲಿದ್ದಾರೆ.
ಉತ್ತಮ ಆರಂಭ
ಇನ್ನೂ 2ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಜೋಡಿ ಉತ್ತಮ ಜೊತೆಯಾಟ ನೀಡಿದೆ. ಮೊದಲ ಪಂದ್ಯದ 2 ಇನ್ನಿಂಗ್ಸ್ನಲ್ಲೂ ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದ ನಾಯಕ ಟಾಮ್ ಲಾಥಂ, ಈ ಬಾರಿ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ ಮೊದಲ ವಿಕೆಟ್ಗೆ ಡಿವೋನ್ ಕಾನ್ವೆ ಜೊತೆಗೂಡಿ 159 ಎಸೆತಗಳಲ್ಲಿ 77 ರನ್ ಜೊತೆಯಾಟ ನೀಡಿದ್ರು.
ಬಳಿಕ ಕಡಿಮೆ ರನ್ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ಕಿವೀಸ್ 5-6 ನೇ ವಿಕೆಟ್ಗೆ ಕಂಬ್ಯಾಕ್ ಮಾಡಿತು. 5ನೇ ವಿಕೆಟ್ಗೆ ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ 128 ಎಸೆತಗಳಲ್ಲಿ 74 ರನ್ಗಳ ಜೊತೆಯಾಟ ನೀಡಿದ್ರೆ, ದಿನದ ಅಂತ್ಯಕ್ಕೆ 6ನೇ ವಿಕೆಟ್ಗೆ ಟಾಮ್ ಬ್ಲಂಡೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿ 122 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯವಾಗುಳಿದಿದೆ. ಶನಿವಾರ ಈ ಜೋಡಿ 2ನೇ ದಿನದ ಕ್ರೀಸ್ ಆರಂಭಿಸಲಿದ್ದಾರೆ.
ಕಿವೀಸ್ ಪರ ಲಾಥಂ 59 ರನ್, ಬ್ಲಂಡೆಲ್ ಅಜೇಯ 53 ರನ್, ಕಾನ್ವೆ 31 ರನ್, ಡೇರಿಲ್ ಮಿಚೆಲ್ 31 ರನ್, ಹೆನ್ರಿ ನಿಕೋಲ್ಸ್ 16 ರನ್ ಗಳಿಸಿದ್ರೆ, ಫಿಲಿಪ್ಸ್ ಅಜೇಯ 36 ರನ್ ಗಳಿಸಿದ್ರು. ಇನ್ನೂ ರಚಿನ್ ರವೀಂದ್ರ ಶೂನ್ಯ ಸುತ್ತಿದರು.
ಟೀಂ ಇಂಡಿಯಾ ಪರ ಆಕಾಶ್ ದೀಪ್ 2 ವಿಕೆಟ್ ಕಿತ್ತರೆ, ಗುರ್ನೂರ್ ಬ್ರಾರ್, ಅನ್ಶುಲ್ ಕಾಂಬೋಜ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದಾರೆ.

