– 543 ಸ್ಥಾನಗಳಲ್ಲಿ ಹಾಲಿ 540 ಸದಸ್ಯರು; ಎನ್ಡಿಎ ಬಲ 320, ಇಂಡಿಯಾ ಬಲ 183
ನವದೆಹಲಿ: ಸೋಮವಾರದಿಂದ (ನ.30 ರಿಂದ) ಸಂಸತ್ ವಿಶೇಷ ಅಧಿವೇಶನ (Parliament Session) ಆರಂಭವಾಗ್ತಿದೆ. ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ತಿದೆ. ಕೆಲವು ಬದಲಾವಣೆಯೊಂದಿಗೆ ಮತ್ತೊಮ್ಮೆ ಮಹತ್ವದ ಬಿಲ್ ಗಳನ್ನ ತರಲು ಹೊರಟಿರುವ ಮೋದಿ ಸರ್ಕಾರಕ್ಕೆ (Modi Govt) ಸಂಖ್ಯಾಬಲದ್ದೇ ದೊಡ್ಡ ಸವಾಲಾಗಿದೆ.
ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಮತ್ತೊಮ್ಮೆ ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸಂಸತ್ ಅಧಿವೇಶನ ಕರೆದಿದೆ. ನವೆಂಬರ್ 30 ರಿಂದ ಲೋಕಸಭೆ, ಡಿ.2 ರಿಂದ ರಾಜ್ಯಸಭೆ ಕಲಾಪ ಆರಂಭವಾಗಲಿದೆ. ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.
4 ದಿನಗಳ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಹಾಗೂ 2029ರ ಚುನಾವಣೆ ವೇಳೆಗೆ ಶೇ. 33 ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆ ಮಂಡನೆಯಾಗುವ ಸಾಧ್ಯತೆ ಇದ್ದು, ಲೋಕಸಭಾ ಸ್ಥಾನಗಳನ್ನು 543 ರಿಂದ 850 ಕ್ಕೆ ಏರಿಸುವ ಚಿಂತನೆ ನಡೆದಿದೆ.
2/3 ಬಹುಮತದ ಅಗತ್ಯ
ಈ ಬಿಲ್ ಗಳು ಸಂಸತ್ ನಲ್ಲಿ ಪಾಸ್ ಆಗಲು ಸಾಂವಿಧಾನಿಕ ತಿದ್ದುಪಡಿಯಾಗಬೇಕಿದ್ದು ಇದಕ್ಕೆ 2/3 ಬಹುಮತದ ಅಗತ್ಯವಿದೆ. ಕಳೆದ ಬಾರಿ ಇದೇ ನಂಬರ್ ಗೇಮ್ ನಲ್ಲಿ ಮೋದಿ ಸರ್ಕಾರ ಫೇಲ್ ಆಗಿತ್ತು. ಹೀಗಾಗೀ ಕೆಲವು ತಿದ್ದುಪಡಿಗಳ ಮೂಲಕ ಮಸೂದೆ ಮಂಡನೆಯಾಗುತ್ತಿದೆ. ಮುಖ್ಯವಾಗಿ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಪ್ರಸ್ತಾಪ ಕೈ ಬಿಟ್ಟು ರಾಜ್ಯಗಳಲ್ಲಿ 50% ಕ್ಷೇತ್ರಗಳನ್ನು ಹೆಚ್ಚಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಬದಲಾದ ಮಸೂದೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಇನ್ನೂ ಈ ಮಸೂದೆಗಳು ಮಂಡನೆಯಾದರೆ ವಿಪಕ್ಷಗಳು ಇದಕ್ಕೆ ಬೆಂಬಲಿಸ್ತಾವ ಅನ್ನೊ ಪ್ರಶ್ನೆ ಇದೆ. ಹಾಗಿದ್ರೆ ಈ ಬಿಲ್ ಪಾಸ್ ಆಗಲು ಎಷ್ಟು ಸಂಖ್ಯೆ ಬೇಕು? ಸರ್ಕಾರದ ಬಳಿ ಇರುವ ನಂಬರ್ ಏನು ಅಂತಾ ಒಮ್ಮೆ ನೋಡೊದಾದ್ರೆ…
40 ಮತಗಳ ಕೊರತೆ
ಈ ನಡುವೆ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆಪ್, ಟಿಎಂಸಿ, ಎನ್ಸಿಪಿ ಸೇರಿದಂತೆ ಕೆಲ ಪಕ್ಷಗಳ ಸಂಸದರು ಬಿಜೆಪಿ ಜೊತೆಗೆ ಕೈ ಜೋಡಿಸಿದ್ದಾರೆ. ಹೀಗಾಗಿ 40 ಮತಗಳ ಕೊರತೆ ಪೈಕಿ ಸುಮಾರು 20 ಮತಗಳ ಅಗತ್ಯ ಬೀಳುವ ಸಾಧ್ಯತೆ ಇದೆ. ಕೆಲವು ಷರತ್ತುಗಳೊಂದಿಗೆ ಬೆಂಬಲ ನೀಡುವುದಾಗಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಬೆಂಬಲ ನೀಡುವುದಾಗಿ ಹೇಳಿದೆ, ಡಿಎಂಕೆ ಗೈರಾಗುವ ಮೂಲಕ ಪರೋಕ್ಷ ಬೆಂಬಲವೂ ನೀಡಬಹುದು ಎನ್ನಲಾಗುತ್ತಿದೆ.
ಮೋದಿ ಸರ್ಕಾರ ತನ್ನ ಬಹುಮತ ಸಿಕ್ರೇಟ್ ಅನ್ನು ಇನ್ನು ಗೌಪ್ಯವಾಗಿಟ್ಟುಕೊಂಡಿದ್ದು ಅಧಿವೇಶನದಲ್ಲಿ ಬಿಲ್ ಗಳನ್ನು ಪಾಸ್ ಮಾಡಿಕೊಳ್ಳುವ ಮೂಲಕ ಈ ಬಾರಿ ಐತಿಹಾಸಿಕ ನಿರ್ಧಾರವನ್ನು ಮಾಡಿ ತೋರಿಸುವ ಇರಾದೆಯಲ್ಲಿದ್ದರೆ ಇತ್ತ ವಿರೋಧ ಪಕ್ಷಗಳು ಬದಲಾದ ಬಿಲ್ ನಲ್ಲಿ ಏನಿದೆ ಅಂತಾ ಪರಿಶೀಲನೆಗೆ ಮುಂದಾಗಿದ್ದು ಭಾರಿ ರಾಜಕೀಯ ಲೆಕ್ಕಚಾರಗಳು ನಡೆಯುತ್ತಿದೆ.

